Site icon Vistara News

ಕಾಳಿ ದೇವಿ ಪೋಸ್ಟರ್‌ ವಿವಾದ; ಹಿಂದೂಗಳ ಕ್ಷಮೆ ಕೇಳಿದ ಕೆನಡಾದ ಆಗಾ ಖಾನ್‌ ಮ್ಯೂಸಿಯಂ

Aga Khan Museum

ಟೊರೊಂಟೊ: ತಮಿಳುನಾಡಿನ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಕಾಳಿ ಚಿತ್ರದ ಪೋಸ್ಟರ್‌ನಿಂದ ಉಂಟಾದ ವಿವಾದಕ್ಕೆ ಕೆನಡಾದ ಟೊರಂಟೊದ ಆಗಾ ಖಾನ್‌ ಮ್ಯೂಸಿಯಂ ಕ್ಷಮೆ ಕೇಳಿದೆ. ಈ ಮ್ಯೂಸಿಯಂನಲ್ಲಿ ಅಂಡರ್‌ ದಿ ಟೆಂಟ್‌ ಯೋಜನೆಯಡಿ ಆಯೋಜಿಸಿದ್ದ ರಿದಮ್‌ ಆಫ್‌ ಕೆನಡಾ ಉತ್ಸವದಲ್ಲಿ ಪೋಸ್ಟರ್‌ ಬಿಡುಗಡೆಯಾಗಿತ್ತು. ಆದರೆ ಈ ಪೋಸ್ಟರ್‌ನಲ್ಲಿ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‌ಜಿಬಿಟಿಕ್ಯೂ (ತೃತೀಯ ಲಿಂಗಿಗಳು) ಸಮುದಾಯದ ಬಾವುಟವನ್ನು ನೋಡಿದ ಹಿಂದು ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೀಗ ಪ್ರಕಟಣೆ ಬಿಡುಗಡೆ ಮಾಡಿರುವ ಟೊರಂಟೊ ಮ್ಯೂಸಿಯಂ ʼಅಂಡರ್‌ ದಿ ಟೆಂಟ್‌ ಯೋಜನೆಯಡಿ ಪ್ರದರ್ಶಿತಗೊಂಡ 18 ಚಿಕ್ಕ ವಿಡಿಯೋಗಳಲ್ಲಿ ಒಂದು ವಿಡಿಯೋ ಹಿಂದೂ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಈ ಬಗ್ಗೆ ನಾವು ಕ್ಷಮೆ ಕೋರುತ್ತೇವೆʼ ಎಂದು ಹೇಳಿದೆ.

ವಿವಿಧ ಜನಾಂಗೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗಾಗಿ ಟೊರಂಟೊ ಮೆಟ್ರೋಪಾಲಿಟನ್‌ ಯೂನಿವರ್ಸಿಟಿ ಅಂಡರ್‌ ದಿ ಟೆಂಟ್ ಎಂಬ ಕಾರ್ಯಕ್ರಮವನ್ನು ರೂಪಿಸಿತು. ಅದರಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅವರ ವೈಯಕ್ತಿಕ ತಿಳಿವಳಿಕೆಗೆ ತಕ್ಕಂತೆ, ಕೆನಡಾದ ಬಹುಸಾಂಸ್ಕೃತಿಕತೆಯನ್ನು ಬಿಂಬಿಸುವ ಅಂಶಗಳುಳ್ಳ ವಿಡಿಯೋ ಪ್ರದರ್ಶನ ಮಾಡಬೇಕಿತ್ತು. ನಮ್ಮ ವಿವಿಧ ಜನಾಂಗಗಳು, ಮತಗಳ ಮಧ್ಯೆಯ ಸಂಸ್ಕೃತಿಯನ್ನು ಕಲೆಯ ಮೂಲಕ ಅರ್ಥ ಮಾಡಿಸುವುದು ನಮ್ಮ ಮ್ಯೂಸಿಯಂನ ಉದ್ದೇಶವಾಗಿದ್ದರಿಂದ ಅಂಡರ್‌ ದಿ ಟೆಂಟ್‌ ಕಾರ್ಯಕ್ರಮ ನಮ್ಮಲ್ಲಿಯೇ ನಡೆದಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಅಂಡರ್‌ ದಿ ಟೆಂಟ್‌ನ ಮುಖ್ಯ ಉದ್ದೇಶ ಪ್ರತಿ ಧರ್ಮದ ಧಾರ್ಮಿಕ ಭಾವನೆಗಳು, ನಂಬಿಕೆಗಳನ್ನು ಗೌರವಿಸುವುದು. ಆದರೆ ಒಂದು ವಿಡಿಯೋ ಇದಕ್ಕೆ ತದ್ವಿರುದ್ಧವಾಗಿ ಹಿಂದು ಸಮುದಾಯಕ್ಕೆ ನೋವುಂಟು ಮಾಡಿದು ಬೇಸರ ತಂದಿದೆ ಎಂದು ಹೇಳಿದೆ.

ಸಂಸದ ಚಂದ್ರ ಆರ್ಯ ಬೇಸರ
ಕೆನಡಾದಲ್ಲಿರುವ ಕರ್ನಾಟಕ ಮೂಲದ ಸಂಸದ ಚಂದ್ರ ಆರ್ಯ ಅವರೂ ಕೂಡ ಕಾಳಿ ಪೋಸ್ಟರ್‌ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವೀಟ್‌ ಮಾಡಿರುವ ಅವರು, ʼಲೀನಾ ಮಣಿಮೇಕಲೈ ಹಾಕಿರುವ ಕಾಳಿ ಮಾತೆ ಪೋಸ್ಟರ್‌ ನೋಡಿ ತುಂಬ ನೋವಾಯಿತು. ಕಳೆದ ಕೆಲವು ವರ್ಷಗಳಿಂದ ಕೆನಡಾದಲ್ಲಿರುವ ಭಾರತ ವಿರೋಧಿ, ಹಿಂದು ವಿರೋಧಿ ಗುಂಪುಗಳು ನಿರಂತರವಾಗಿ ಹಿಂದು ಧರ್ಮ ಮತ್ತು ದೇವಾಲಯಗಳ ವಿರುದ್ಧ ಆರ್ಟಿಕಲ್‌ಗಳನ್ನೆಲ್ಲ ಬರೆಯುತ್ತಿವೆ. ಅದರ ಪರಿಣಾಮವಾಗಿ ಇಂಥದ್ದೆಲ್ಲ ನಡೆಯುತ್ತಿದೆ. ಈಗ ಟೊರಂಟೊ ಮ್ಯೂಸಿಯಂ ಈ ಬಗ್ಗೆ ಕ್ಷಮೆ ಕೇಳಿರುವುದು ಸ್ವಾಗತಾರ್ಹʼ ಎಂದಿದ್ದಾರೆ.

ಇದನ್ನೂ ಓದಿ: ಕೆನಡಾ ಸಂಸತ್ತಲ್ಲಿ ಕನ್ನಡದ ಕಂಪು ಸೂಸಿದ ಚಂದ್ರ ಆರ್ಯ ಯಾರು?-ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

Exit mobile version