ನವದೆಹಲಿ: ಭಾರತದಲ್ಲಿ ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲಾಗಿದೆ. ವಿದೇಶದಲ್ಲೂ ಹಲವು ಖಲಿಸ್ತಾನಿ ಉಗ್ರರನ್ನು (Khalistani Terrorists) ಹತ್ಯೆ ಮಾಡಲಾಗಿದೆ. ಇದರ ಬೆನ್ನಲ್ಲೇ ಖಲಿಸ್ತಾನಿ ಉಗ್ರರು ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ವಿದೇಶಗಳಲ್ಲಿರುವ ಭಾರತದ ರಾಯಭಾರಿ ಹಾಗೂ ಹಿಂದು ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಹಾಗೆಯೇ, ಗುಪ್ತಚರ ಇಲಾಖೆಗಳು ಹೈ ಅಲರ್ಟ್ ಘೋಷಿಸಿವೆ ಎಂದು ತಿಳಿದುಬಂದಿದೆ.
ಜುಲೈ 2ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಇದಾದ ಬಳಿಕ ಗುಪ್ತಚರ ಇಲಾಖೆ ಎಚ್ಚೆತ್ತುಕೊಂಡಿದೆ. ಖಲಿಸ್ತಾನ್ ಉಗ್ರ ಸಂಘಟನೆಯ ಹಲವು ಪ್ರಮುಖ ಉಗ್ರರನ್ನು ಹತ್ಯೆ ಮಾಡಿದ ಬಳಿಕ ವಿದೇಶದಲ್ಲಿರುವ ಖಲಿಸ್ತಾನಿ ಉಗ್ರರು ಒತ್ತಡದಲ್ಲಿದ್ದಾರೆ. ಹಾಗೆಯೇ, ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರರನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಾಗಾಗಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದು ಖಲಿಸ್ತಾನಿಗಳ ಸಂಚಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಯಾವ ಪ್ರಮುಖರ ಹತ್ಯೆ?
ಕೆಲ ತಿಂಗಳಲ್ಲಿ ವಿದೇಶದಲ್ಲಿರುವ ಮೂವರು ಖಲಿಸ್ತಾನಿ ಉಗ್ರರು ಹತ್ಯೆಗೀಡಾಗಿದ್ದಾರೆ. ಮೇ ತಿಂಗಳಲ್ಲಿ ಪಾಕಿಸ್ತಾನ ಮೂಲದ ಖಲಿಸ್ತಾನಿ ಉಗ್ರ ಪರಮ್‌ಜಿತ್ ಸಿಂಗ್ ಪಂಜ್ವಾರ್, ಜೂನ್‌ನಲ್ಲಿ ಅವತಾರ್ ಸಿಂಗ್ ಖಂಡಾ ಬ್ರಿಟನ್‌ನಲ್ಲಿ ಹತ್ಯೆಗೀಡಾಗಿದ್ದಾರೆ. ಹಾಗೆಯೇ, ಜೂನ್‌ನಲ್ಲಿಯೇ ಕೆನಡಾದಲ್ಲಿ ಖಲಿಸ್ತಾನಿಗಳ ನಾಯ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಹತ್ಯೆ ಮಾಡಲಾಗಿದೆ. ಇದರಿಂದಾಗಿ ಖಲಿಸ್ತಾನಿ ಉಗ್ರರು ಒತ್ತಡದಲ್ಲಿದ್ದಾರೆ. ಏಕಾಏಕಿ ತಮ್ಮ ನಾಯಕರ ಹತ್ಯೆಯಿಂದ ಅವರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Khalistani Terrorist: ಕೆನಡಾದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಫಿನಿಶ್
ಯಾರ‍್ಯಾರು ಟಾರ್ಗೆಟ್?
ವಿದೇಶಗಳಲ್ಲಿರುವ ಭಾರತದ ರಾಯಭಾರಿಗಳು, ಪಂಜಾಬ್‌ನಲ್ಲಿರುವ ಹಿಂದು ಪ್ರಮುಖರನ್ನು ಗುರಿಯಾಗಿಸಿ ದಾಳಿ ಮಾಡಲು ಖಲಿಸ್ತಾನಿಗಳು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಅದರಲ್ಲೂ, ಖಲಿಸ್ತಾನಿಗಳೇ ಜಾಸ್ತಿ ಇರುವ ಅಮೆರಿಕ, ಬ್ರಿಟನ್, ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲಿರುವ ಭಾರತದ ರಾಯಭಾರಿಗಳು ಪ್ರಮುಖ ಗುರಿಯಾಗಿದ್ದಾರೆ. ಇದಕ್ಕಾಗಿ, ಈ ರಾಷ್ಟ್ರಗಳಲ್ಲಿರುವ ಭಾರತದ ರಾಯಭಾರಿ ಹಾಗೂ ರಾಜತಾಂತ್ರಿಕ ಕಚೇರಿಗಳ ಭದ್ರತೆ ಹೆಚ್ಚಿಸಲಾಗುತ್ತಿದೆ. ಹಾಗೆಯೇ, ಖಲಿಸ್ತಾನಿ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ