Site icon Vistara News

Agnipath: ಅಗ್ನಿವೀರರು ಕರ್ತವ್ಯದಲ್ಲಿದ್ದಾಗ ಹುತಾತ್ಮರಾದರೆ ಸಿಗಲಿದೆ ಒಂದು ಕೋಟಿ ರೂ. ಪರಿಹಾರ

Anil puri

ನವ ದೆಹಲಿ: ಆಗ್ನಿಪಥ ಯೋಜನೆಯಲ್ಲಿ ಜೀವನ ಭದ್ರತೆ ಇಲ್ಲ ಎಂಬ ಆತಂಕವನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಉತ್ತಮ ವೇತನ, ನಾಲ್ಕು ವರ್ಷಗಳ ಬಳಿಕ ನಿವೃತ್ತಿಯಾದಾಗ ಸೇವಾನಿಧಿಯನ್ನು ಒದಗಿಸುವುದಾಗಿ ಹೇಳಿದ್ದನ್ನು ಅದು ಪುನರುಚ್ಚರಿಸಿದೆ. ಜತೆಗೆ, ಒಂದೊಮ್ಮೆ ಅಗ್ನಿವೀರರು ಕರ್ತವ್ಯದಲ್ಲಿರುವಾಗಲೇ ಹುತಾತ್ಮರಾದರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ದೊರೆಯಲಿದೆ ಎಂಬ ಅಂಶವನ್ನು ಒತ್ತಿ ಹೇಳಿದೆ.

ಭಾನುವಾರ ರಕ್ಷಣಾ ಸಚಿವಾಲಯ ಇರುವ ಸೌತ್‌ ಬ್ಲಾಕ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್‌ ಜನರಲ್ ಅನಿಲ್‌ ಪುರಿ ಹೊಸ ಯೋಜನೆ ಸಿಗುವ ಜೀವನ ಭದ್ರತೆ ಹಾಗೂ ಪ್ರಯೋಜನಗಳನ್ನು ಒತ್ತಿ ಹೇಳಿದರು.

ಅಗ್ನಿವೀರರಿಗೆ ಸಿಯಾಚಿನ್‌ನಂಥ ಪ್ರದೇಶದಲ್ಲಿ ಕೆಲಸ ಮಾಡುವ ಸೈನಿಕರಿಗೆ ಎಷ್ಟು ಭತ್ಯೆ ಸಿಗುತ್ತದೋ ಅಷ್ಟೇ ಭತ್ಯೆ ಇಲ್ಲೂ ಸಿಗಲಿದೆ. ಈಗಾಗಲೇ ನೇಮಕವಾಗಿರುವ ಸೈನಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಇವರಿಗೆ ದೊರೆಯಲಿವೆ. ಸೇವಾ ಸೌಲಭ್ಯಗಳಲ್ಲಿ ಯಾವ ತಾರತಮ್ಯವನ್ನೂ ಮಾಡುವುದಿಲ್ಲ ಎಂದು ಲೆ. ಜನರಲ್‌ ಅನಿಲ್‌ ಪುರಿ ಸ್ಪಷ್ಟಪಡಿಸಿದರು.

೪೬,೦೦೦ ಸೈನಿಕರ ನೇಮಕ
ಅಗ್ನಿಪಥ್‌ ಯೋಜನೆಯಲ್ಲಿ ಸದ್ಯ ೪೬೦೦೦ ಅಗ್ನಿವೀರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಯೋಜನೆಯ ವಿಶ್ಲೇಷಣೆ ಮತ್ತು ಅವಲೋಕನ ನಡೆಯಲಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಸಂಖ್ಯೆ ವಾರ್ಷಿಕ ೫೦೦೦೦-೬೦೦೦೦ ಇರುತ್ತದೆ. ಆದರೆ, ಬಳಿಕ ಅದು ೧.೨೫ ಲಕ್ಷಕ್ಕೇರಲಿದೆ ಎಂದು ಅನಿಲ್‌ ಪುರಿ ತಿಳಿಸಿದರು.

ಸರಾಸರಿ ವಯಸ್ಸು ಇಳಿಕೆ
ಸೇನೆಯಲ್ಲಿ ಜೋಷ್‌ ಮತ್ತು ಹೋಷ್‌ ಹೆಚ್ಚಿಸಬೇಕು ಎನ್ನುವ ಕಾರಣಕ್ಕೆ ಒಟ್ಟಾರೆ ಸರಾಸರಿ ವಯಸ್ಸನ್ನು ಇಳಿಸುವ ಪ್ರಯತ್ನ ನಡೆಸಲಾಗಿದೆ. ಸದ್ಯ ಸೇನೆಯಲ್ಲಿ ಸರಾಸರಿ ವಯಸ್ಸು ೩೨ ಇದೆ. ಅದನ್ನು ಇನ್ನೂ ಕಡಿಮೆ ಮಾಡಬೇಕು ಎಂದು ಕಾರ್ಗಿಲ್‌ ಮರುಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಅದರನ್ವಯ ಈಗ ಅಗ್ನಿಪಥ್‌ ಯೋಜನೆ ಜಾರಿಗೊಳಿಸಲಾಗಿದೆ ಎಂದರು ಅನಿಲ್‌ ಪುರಿ.

ಈಗಲೂ ನಿವೃತ್ತರಾಗುತ್ತಿದ್ದಾರೆ
ನಾಲ್ಕೇ ವರ್ಷದಲ್ಲಿ ಸೈನಿಕರನ್ನು ನಿವೃತ್ತಿಗೊಳಿಸಿದರೆ ಹೇಗೆ ಎನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ. ಆದರೆ, ಸೇನೆಯಲ್ಲಿ ಅವಧಿಪೂರ್ವ ಹೊಸತೇನೂ ಅಲ್ಲ ಎಂದಿದ್ದಾರೆ ಪುರಿ. ʻʻಈಗಲೇ ವರ್ಷಕ್ಕೆ ಸುಮಾರು ೧೭,೬೦೦ ಮಂದಿ ಅವಧಿಪೂರ್ವ ನಿವೃತ್ತಿ ಪಡೆದುಕೊಳ್ಳುತ್ತಿದ್ದಾರೆ. ಅವರು ನಿವೃತ್ತಿಯ ಬಳಿಕ ಏನು ಮಾಡುತ್ತಾರೆ ಎನ್ನುವ ಪ್ರಶ್ನೆಯನ್ನು ಇದುವರೆಗೆ ಯಾರೂ ಕೇಳಿಲ್ಲ,ʼʼ ಎಂದು ಪುರಿ ಆಶ್ಚರ್ಯ ವ್ಯಕ್ತಪಡಿಸಿದರು.

ವೇತನ ಪ್ಯಾಕೇಜ್‌ ಹೇಗಿರುತ್ತದೆ?
ಅಗ್ನಿವೀರರು ಹುತಾತ್ಮರಾದರೆ ಒಂದು ಕೋಟಿ ರೂ. ವಿಮೆ ಪರಿಹಾರ ದೊರೆಯಲಿದೆ ಎನ್ನುವುದನ್ನು ಸರಕಾರ ಮತ್ತೆ ಸ್ಪಷ್ಟಪಡಿಸಿದೆ. ಹಾಗಿದ್ದರೆ ಈ ಸೈನಿಕರಿಗೆ ವೇತನ ಎಷ್ಟು ಸಿಗಲಿದೆ?

ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಮಾಸಿಕ ವೇತನ ನೀಡಲಾಗುತ್ತದೆ. ಪಿಎಫ್‌, ಪಿಪಿಎಫ್‌ ವ್ಯವಸ್ಥೆ ಇದೆ. ಮೊದಲ ವರ್ಷ ಪ್ರತಿ ತಿಂಗಳು 30,000 ರೂ.ಗಳ ವೇತನ ನಿಗದಿಯಾಗಿದೆ. ಇದರಲ್ಲಿ 9,000 ರೂ. ಅಗ್ನಿವೀರರ ಸೇವಾನಿಧಿ ಪ್ಯಾಕೇಜ್‌ಗೆ ಜಮೆಯಾಗುತ್ತದೆ. ಸರ್ಕಾರ ಕೂಡ 9,000 ರೂ.ಗಳನ್ನು ಅದಕ್ಕೆ ಸೇರಿಸುತ್ತದೆ. ಒಟ್ಟು 18,000 ರೂ. ಆಗುತ್ತದೆ. ಅಂದರೆ ಮೊದಲ ವರ್ಷ ಸುಮಾರು 4.76 ಲಕ್ಷ ರೂ. ಸಿಗಲಿದೆ.

ಮುಂದಿನ ವರ್ಷಗಳಲ್ಲಿ ತಲಾ ೧೦% ವೇತನ ಹೆಚ್ಚಳವಾಗಿ ಎರಡನೇ ವರ್ಷ ೩೩,೦೦೦ ರೂ., ಮೂರನೇ ವರ್ಷ ೩೬,೫೦೦ ರೂ. ಮತ್ತು ನಾಲ್ಕನೇ ವರ್ಷ ೪೦,೦೦೦ ರೂ. ವೇತನ ದೊರೆಯಲಿದೆ.

11.71 ಲಕ್ಷ ರೂ. ಮತ್ತು ಬಡ್ಡಿಯ ಸೇವಾ ನಿಧಿ

ನಾಲ್ಕು ವರ್ಷಗಳ ಬಳಿಕ ಶೇ.75 ಮಂದಿ ಅಗ್ನಿವೀರರು ನಿವೃತ್ತರಾಗುತ್ತಾರೆ. ಆಗ ಅವರಿಗೆ ನೀಡಲಾಗುವ ಸೇವಾ ನಿಧಿ ಪ್ಯಾಕೇಜ್‌ನಲ್ಲಿ ೧೧.೭೧ ಲಕ್ಷ ರೂ. ಮತ್ತು ಬಡ್ಡಿ ದೊರೆಯುತ್ತದೆ. ಈ ಸೇವಾ ನಿಧಿ ಆಧಾರದಲ್ಲಿ ಬ್ಯಾಂಕ್‌ನಿಂದ ೧೮ ಲಕ್ಷ ರೂ. ಸಾಲ ಪಡೆಯಬಹುದು. ಇದು ಭವಿಷ್ಯದ ಐೋಜನೆಗಳಿಗೆ ಅನುಕೂಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಇದನ್ನೂ ಓದಿ| ವಿಸ್ತಾರ Explainer: ಸೇನಾ ನೇಮಕಾತಿಯಲ್ಲಿ ‘ಅಗ್ನಿ’ ಕ್ರಾಂತಿ

Exit mobile version