ನವ ದೆಹಲಿ: ಒಳ್ಳೆಯ ಉದ್ದೇಶದಿಂದ ರೂಪಿಸಿದ ಯೋಜನೆಗಳು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದು ನಮ್ಮ ದೇಶದ ದುರದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳದಿದಾರೆ. ಅವರು ಅಗ್ನಿಪಥ್ ಯೋಜನೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಹೇಳಿಕೆ ನೀಡಿರುವುದು ನಿಜವಾದರೂ ಅದನ್ನು ಎಲ್ಲೂ ಉಲ್ಲೇಖಿಸಿಲ್ಲ. ಅಗ್ನಿಪಥ್ ವಿರುದ್ಧ ದೇಶದ ನಾನಾ ಭಾಗಗಳಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆಯುತ್ತಿರುವುದು ಸರಕಾರದ ನಿದ್ದೆಗೆಡಿಸಿದೆ.
ದಿಲ್ಲಿಯ ಪ್ರಗತಿ ಮೈದಾನ ಸಂಯೋಜಿತ ಟ್ರಾನ್ಸಿಟ್ ಕಾರಿಡಾರ್ ಯೋಜನೆಯಡಿ ಪ್ರಧಾನ ಸುರಂಗ ಮತ್ತು ಅಂಡರ್ ಪಾಸನ್ನು ಉದ್ಘಾಟಿಸಿ ಅವರು ಮಾತನಾಡುವ ವೇಳೆ ಈ ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳು ಕೂಡಾ ಟಿಆರ್‌ಪಿಗಾಗಿ ಈ ಇಂಥ ಸುಳಿಯೊಳಗೆ ಸಿಕ್ಕಿ ಹಾಕಿಕೊಳ್ಳುತ್ತಿವೆ ಎಂದೂ ಮೋದಿ ಹೇಳಿದರು.
ಕಳೆದ ಬಾರಿ ಸೆಂಟ್ರಲ್ ವಿಸ್ಟಾ ಯೋಜನೆಗೂ ಇದೇ ರೀತಿಯ ವಿರೋಧ ಎದುರಾಗಿದ್ದನ್ನು ಮೋದಿ ನೆನಪು ಮಾಡಿಕೊಂಡರು. ಕೆಲವರು ಉದ್ದೇಶಪೂರ್ವಕವಾಗಿ ಈ ಯೋಜನೆಯನ್ನು ವಿರೋಧಿಸಿದರು. ತಪ್ಪು ಕಲ್ಪನೆಗಳನ್ನು ಹರಡಿದರು. ಇದು ರಕ್ಷಣಾ ಸಚಿವಾಲಯವೂ ಸೇರಿದಂತೆ ಎಲ್ಲ ಹಳೆ ಸರಕಾರಿ ಕಟ್ಟಡಗಳ ಮರು ನಿರ್ಮಾಣ ಯೋಜನೆಯ ಒಂದು ಭಾಗ ಎನ್ನುವುದು ಗೊತ್ತಿದ್ದರೂ ರಾಜಕೀಯ ಪಕ್ಷಗಳು ಉದ್ದೇಶ ಪೂರ್ವಕವಾಗಿ ವಿರೋಧಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿ ಈಗ ವೇಗವಾಗಿ ನಡೆಯುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಮೋದಿ, ಮುಂದಿನ ದಿನಗಳಲ್ಲಿ ದೇಶದ ರಾಜಧಾನಿ ದಿಲ್ಲಿ ಜಾಗತಿಕವಾಗಿ ಚರ್ಚೆಯ ವಿಷಯವಾಗಲಿದೆ ಮತ್ತು ಎಲ್ಲ ಭಾರತೀಯರಿಗೂ ಹೆಮ್ಮೆ ತರಲಿದೆ ಎಂದರು.
ಇದನ್ನೂ ಓದಿ| ಸುರಂಗ ಮಾರ್ಗ ಉದ್ಘಾಟಿಸಿ, ಕಸ ಹೆಕ್ಕಿದ ಪ್ರಧಾನಿ ಮೋದಿ; ವಿಡಿಯೋ ವೈರಲ್