ನವ ದೆಹಲಿ: ಭಾರಿ ಪ್ರಮಾಣದ ಹಿಂಸಾಚಾರಕ್ಕೆ ಕಾರಣವಾಗಿರುವ ಕೇಂದ್ರ ಸರಕಾರದ ಅಗ್ನಿಪಥ್ (Agnipath) ಯೋಜನೆಗೆ ಈಗ ರಾಜಕೀಯ ತಿರುವು ದೊರೆತಿದೆ. ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಯೋಜನೆಯನ್ನು ಖಂಡತುಂಡವಾಗಿ ವಿರೋಧಿಸಿದ್ದರೆ, ಬಿಜೆಪಿಯ ಮಿತ್ರಪಕ್ಷಗಳೂ ಯೋಜನೆ ಮರುಪರಿಶೀಲಿಸಲು ಆಗ್ರಹಿಸಿವೆ.
ಅಗ್ನಿಪಥ್ ಯೋಜನೆ ಖಂಡಿಸಿ ದೇಶದ ಏಳು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇನ್ನೂರಕ್ಕೂ ಅಧಿಕ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. ಹಲವಾರು ವಾಹನಗಳನ್ನು ಸುಟ್ಟು ಹಾಕಲಾಗಿದೆ, ದೊಡ್ಡ ಮಟ್ಟದ ಹಾನಿ ಮಾಡಲಾಗಿದೆ. ಈ ಹಿಂಸಾಚಾರದಲ್ಲಿ ಅತಿ ಹೆಚ್ಚು ದೊಂಬಿ ನಡೆದಿರುವುದು ಬಿಹಾರದಲ್ಲಿ.
ಬಿಹಾರದಿಂದ ದೊಡ್ಡ ಪ್ರಮಾಣದಲ್ಲಿ ಯುವಕರು ಸೇನೆ ಸೇರುವ ಪ್ರಕ್ರಿಯೆ ಹಿಂದಿನಿಂದಲೂ ನಡೆದುಬಂದಿದೆ. ಇಲ್ಲಿ ಸೇನಾ ಸೇರ್ಪಡೆ ಎನ್ನುವುದು ಹವ್ಯಾಸವೂ ಹೌದು, ಜೀವನ ಭದ್ರತೆಯ ದಾರಿಯೂ ಹೌದು. ಆದರೆ, ಇದೀಗ ಹೊಸ ಯೋಜನೆಯಲ್ಲಿ ಕೇವಲ ನಾಲ್ಕು ವರ್ಷ ಸೇವೆಗೆ ಅವಕಾಶ ಸಿಗಲಿದೆ, ಮುಂದೆ ಏನು ಮಾಡುವುದು ಎನ್ನುವ ಆತಂಕದೊಂದಿಗೆ ಅವರೀಗ ಬೀದಿಗೆ ಇಳಿದಿದ್ದಾರೆ. ಕೇಂದ್ರ ಸರಕಾರ ಸಾಕಷ್ಟು ಸ್ಪಷ್ಟನೆಗಳನ್ನು ನೀಡಿದರೂ ಕೇಳುವ ಸ್ಥಿತಿಯಲ್ಲಿ ಅವರಿದ್ದಂತಿಲ್ಲ.
ಬಿಹಾರದಲ್ಲಿ ಯುವಕರು ರೊಚ್ಚಿಗೆದ್ದಿರುವುದು ಆಡಳಿತಾರೂಢ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಜೆಡಿಯುಗೆ ಭಾರಿ ತಲೆ ನೋವು ತಂದಿದೆ. ಯುವಕರು ತಮ್ಮ ಭವಿಷ್ಯ ಕರಾಳವಾಗಿದೆ ಎಂಬ ಮನೋಸ್ಥಿತಿಯಲ್ಲಿರುವುದರಿಂದ ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎಂಬ ಭೀತಿ ಉಂಟಾಗಿದೆ. ಹೀಗಾಗಿ ಕೇಂದ್ರ ಸರಕಾರ ಈ ಯೋಜನೆಯನ್ನು ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದೆ.
ʻʻಅಗ್ನಿಪಥ್ ಯೋಜನೆಯಿಂದಾಗಿ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಕರಾಳ ಭವಿಷ್ಯದ ಆತಂಕ ಉಂಟಾಗಿದೆ. ಇದು ರಕ್ಷಣೆ ದೇಶದ ಭದ್ರತೆಗೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಯೋಜನೆಯನ್ನು ಮರುಪರಿಶೀಲಿಸುವುದು ಉತ್ತಮ ಎಂದು ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಬಿಜೆಪಿ ಮಿತ್ರಕೂಟದಲ್ಲಿರುವ ಮತ್ತು ನಿವೃತ್ತ ಸೇನಾ ಕ್ಯಾಪ್ಟನ್ ಆಗಿರುವ ಅಮರೀಂದರ್ ಸಿಂಗ್ ಅವರು ವೃತ್ತಿಪರ ಸೇನೆಗೆ ಇದು ಸೂಕ್ತವಾದ ಐಡಿಯಾ ಅಲ್ಲ ಎಂದು ಹೇಳಿದ್ದಾರೆ. ಯಾವನೇ ಒಬ್ಬ ಸೈನಿಕನಿಗೆ ನಾಲ್ಕು ವರ್ಷದ ಸೇವೆ ತುಂಬ ಕಡಿಮೆ ಅವಧಿಯದ್ದಾಯಿತು. ಇದರಿಂದ ಸೇನೆಯ ಕುರಿತ ಗೌರವವೂ ಕಡಿಮೆಯಾಗಲಿದೆ ಎಂದಿದ್ದಾರೆ.
ಯುವಜನ ವಿರೋಧಿ ಎಂದ ರಾಹುಲ್
ಕೇಂದ್ರ ಸರಕಾರದ ಹಿಂದಿನ ಯೋಜನೆಗಳು ಕೂಡಾ ಜನವಿರೋಧಿಯಾಗಿದ್ದವು ಎಂದು ನೆನಪಿಸುತ್ತಾ ಅಗ್ನಿಪಥ್ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಕೃಷಿ ಕಾಯಿದೆಯನ್ನು ರೈತರೇ ವಿರೋಧಿಸಿದರು, ನೋಟ್ ಬ್ಯಾನನ್ನು ಆರ್ಥಿಕ ತಜ್ಞರು ವಿರೋಧಿಸಿದರು, ಜಿಎಸ್‌ಟಿಯನ್ನು ವ್ಯಾಪಾರಿಗಳೇ ವಿರೋಧಿಸಿದರು. ಈಗ ಅಗ್ನಿಪಥ್ ಯೋಜನೆಯನ್ನು ಯುವಜನರು ವಿರೋಧಿಸುತ್ತಿದ್ದಾರೆ ಎಂದು ಅವರು ನೆನಪಿಸಿದ್ದಾರೆ. ಪ್ರಧಾನ ಮಂತ್ರಿಗಳಿಗೆ ದೇಶದ ಜನರಿಗೆ ಏನು ಬೇಕು ಎನ್ನುವುದು ಅರ್ಥವಾಗುವುದಿಲ್ಲ. ಅವರು ತಮ್ಮ ಗೆಳೆಯರನ್ನು ಬಿಟ್ಟು ಬೇರೆ ಯಾರ ಮಾತನ್ನೂ ಕೇಳುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ| Agnipath protestಗೆ ಸಾವಿನ ತಿರುವು, ಒಬ್ಬ ದೊಂಬಿಕೋರ ಪೊಲೀಸ್ ಗುಂಡಿಗೆ ಬಲಿ