Site icon Vistara News

ಅಗ್ನಿಪಥ್‌ಗೆ ಕಾಡಿತೇ ಪೂರ್ವಸಿದ್ಧತೆ ಕೊರತೆ, ಕೃಷಿ ಕಾಯಿದೆಯಂತೆಯೇ ಹಿನ್ನಡೆ ಆದೀತೆ?

Narendra modi

ನವ ದೆಹಲಿ: ಐತಿಹಾಸಿಕ ಅಗ್ನಿಪಥ್‌ ಯೋಜನೆಯ ವಿರುದ್ಧದ ಪ್ರತಿಭಟನೆ ದೇಶದೆಲ್ಲೆಡೆ ಅಗ್ನಿಕುಂಡಗಳನ್ನೇ ನಿರ್ಮಿಸಿದೆ. ಅಗ್ನಿವೀರರಾಗಿ ಸೇನೆಯನ್ನು ಮುನ್ನಡೆಸಿ ರಾಷ್ಟ್ರದ ರಕ್ಷಣೆ ಮಾಡಬೇಕಾಗಿದ್ದ ಯುವಕರು ಅಗ್ನಿಜ್ಞಾಲೆಯನ್ನೇ ಸೃಷ್ಟಿಸಿ ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಾಗಿ ಕಾಡುತ್ತಿದ್ದಾರೆ. ದೊಣ್ಣೆ, ಕತ್ತಿಗಳು, ಪೆಟ್ರೋಲ್‌ ಬಾಂಬ್‌ಗಳು ವಿಜೃಂಭಿಸುತ್ತಿವೆ. ಭಾರತ್‌ ಮಾತಾ ಕೀ ಜೈ ಅನ್ನುತ್ತಲೇ ದೇಶದ ಆಸ್ತಿಪಾಸ್ತಿಗಳನ್ನು ನಾಶಪಡಿಸುವ ದೊಂಬಿ ಕಾಳಗವನ್ನು ಹೇಗೆ ತಡೆಯುವುದು ಹೇಗೆಂಬ ದಾರಿ ಕಾಣದೆ ಸರಕಾರಗಳು ತಲ್ಲಣಗೊಂಡಿವೆ.

ಕೇಂದ್ರ ಸರಕಾರ ಇದೊಂದು ಚಾರಿತ್ರಿಕ ಯೋಜನೆ, ಇದರಿಂದ ಯುವ ಸಮುದಾಯಕ್ಕೆ ದೊಡ್ಡ ಲಾಭವಿದೆ. ಇಸ್ರೇಲ್‌ ಮಾದರಿಯಲ್ಲಿ ಆಸಕ್ತ ಎಲ್ಲರಿಗೂ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ. ಅಗ್ನಿವೀರರಾಗುವವರಿಗೆ ನಾಲ್ಕು ವರ್ಷದ ಬಳಿಕ ನಿವೃತ್ತಿ ಸಂದರ್ಭದಲ್ಲಿ ಉತ್ತಮ ಮೊತ್ತದ ಸೇವಾ ನಿಧಿ ದೊರೆಯಲಿದೆ, ಅವರು ಬೇರೆ ಉದ್ಯೋಗ ಮುಂದುವರಿಸಲು ಅವಕಾಶ ಸಿಗಲಿದೆ ಎಂಬ ಧನಾತ್ಮಕ ಅಂಶಗಳನ್ನು ಅಗ್ನಿಪಥ್‌ ಯೋಜನೆ ಹೊಂದಿದೆ. ಆದರೆ, ಇದನ್ನು ಪೂರ್ಣ ಪ್ರಮಾಣದಲ್ಲಿ ಯುವಜನರಿಗೆ ತಲುಪಿಸಲು ಸರಕಾರ ವಿಫಲವಾಗಿದೆ.

ಸರಕಾರ ಈ ಯೋಜನೆಯನ್ನು ಪ್ರಕಟಿಸುವ ಮುನ್ನ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು ಎನ್ನುವುದು ನಿಜ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಮತ್ತು ಹೆಚ್ಚುತ್ತಿರುವ ಯೋಧರ ಪಿಂಚಣಿ ಭಾರವನ್ನು ತಗ್ಗಿಸುವ ನಿಟ್ಟಿನಲ್ಲಿ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ಪ್ರಯತ್ನವನ್ನು ಸರಕಾರ ಮಾಡಿದೆ. ಇದೆರಡೂ ಆಗಬೇಕಾಗಿದ್ದ ಕೆಲಸಗಳೇ. ಆದರೆ, ಈ ಉತ್ಸಾಹದಲ್ಲಿ ಸೇನೆಯ ಕುರಿತ ಹಲವು ಸೂಕ್ಷ್ಮ ವಿಚಾರಗಳನ್ನು ಗಮನಿಸಿದಂತೆ ತೋರುತ್ತಿಲ್ಲ. ಯಾವ ಮಟ್ಟದಲ್ಲಿ ಚರ್ಚೆ ನಡೆದು ಇದನ್ನು ಅಂತಿಮಗೊಳಿಸಲಾಗಿದೆಯೋ ಗೊತ್ತಿಲ್ಲ.

ದೊಂಬಿಕೋರರಿಂದ ಅಗ್ನಿಸ್ಪರ್ಶಕ್ಕೆ ಒಳಗಾದ ರೈಲು

ಆದರೆ, ಯೋಜನೆಯಲ್ಲಿ ಹಲವು ಲೋಪದೋಷಗಳಿರುವುದನ್ನು ಸರಕಾರವೇ ಪರೋಕ್ಷವಾಗಿ ಒಪ್ಪಿಕೊಂಡಿದೆ. ಒಬ್ಬ ಯುವಕ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿದ್ದು ಬಂದ ಬಳಿಕ ಮುಂದೇನು ಎನ್ನುವ ಪ್ರಶ್ನೆಗೆ ಸರಕಾರದ ಬಳಿ ಸ್ಪಷ್ಟ ಉತ್ತರವಿರಲಿಲ್ಲ. ಮೊದಲು ನಾಲ್ಕು ವರ್ಷದ ಬಳಿಕ ನಿವೃತ್ತಿಯಾದಾಗ ೧೧ ಲಕ್ಷ ರೂ. ಸೇವಾ ನಿಧಿ ನೀಡಲಾಗುತ್ತದೆ, ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಅದನ್ನು ಬಳಸಿಕೊಂಡು ಉದ್ಯಮ ಮಾಡಬಹುದು ಎಂಬ ಸಲಹೆಯನ್ನು ನೀಡಲಾಯಿತು. ಬಳಿಕ ನಾಲ್ಕು ವರ್ಷದ ಅವಧಿಯಲ್ಲಿ ಪದವಿ ಅಧ್ಯಯನ ನಡೆಸಬಹುದು ಎಂದು ಹೇಳಲಾಯಿತು. ಆ ಬಳಿಕ ಸಶಸ್ತ್ರ ಪೊಲೀಸ್‌ ಪಡೆ, ಅಸ್ಸಾಂ ರೈಫಲ್ಸ್‌, ವಿಮಾನಯಾನ, ಕೋಸ್ಟ್‌ ಗಾರ್ಡ್‌, ರಕ್ಷಣಾ ಇಲಾಖೆಯ ನಾನಾ ಉದ್ಯಮಗಳಲ್ಲಿ ಉದ್ಯೋಗ ನೀಡಲು ನಿರ್ಧಾರ ಮಾಡಲಾಗಿದೆ.

ನಿಜವೆಂದರೆ, ಈ ತೀರ್ಮಾನಗಳನ್ನು ಮಾಡಿದ್ದು ದೇಶವ್ಯಾಪಿ ಗಲಭೆ, ದೊಂಬಿಗಳು ನಡೆದ ಬಳಿಕವೇ. ಹಾಗಿದ್ದರೆ, ಸರಕಾರ ಇಂಥ ಅತಿ ಮಹತ್ವದ ಯೋಜನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಇಂಥ ವಿಷಯಗಳ ಬಗ್ಗೆ, ನಿವೃತ್ತರ ಭವಿಷ್ಯದ ಬಗ್ಗೆ ಸರಕಾರ ಯೋಚಿಸಿಯೇ ಇರಲಿಲ್ಲವೇ? ಇದರ ಬಗ್ಗೆ ಚಿಂತಿಸಲು ದೊಂಬಿಯನ್ನೇ ನಡೆಸಬೇಕಾಯಿತೇ ಎಂಬ ಪ್ರಶ್ನೆಗಳು ಕಾಡುತ್ತವೆ.

ನಿಜವೆಂದರೆ, ಇಂಥ ಯೋಜನೆಗಳು ಜಾರಿ ಮಾಡುವಾಗ ಪ್ರಾಯೋಗಿಕವಾಗಿ ಪೈಲಟ್‌ ಯೋಜನೆಗಳನ್ನು ಜಾರಿ ಮಾಡುವುದು ರೂಢಿ. ಸೇನೆಯ ಒಂದು ವಿಭಾಗದಲ್ಲಿ ಒಂದಷ್ಟು ಮಂದಿಯನ್ನು ಈ ರೀತಿ ಸೇರಿಸಿಕೊಂಡು ಹೇಗೆ ನಡೆಯುತ್ತದೆ ಎನ್ನುವುದನ್ನು ಗಮನಿಸಬಹುದಾದ ಅವಕಾಶವಿತ್ತು. ಅದರಲ್ಲಿನ ಸರಿ ತಪ್ಪುಗಳನ್ನು ವಿಶ್ಲೇಷಿಸಲು ಅವಕಾಶ ದೊರೆಯುತ್ತಿತ್ತು. ಆದರೆ, ರಕ್ಷಣಾ ಇಲಾಖೆ ಮುಂದಿನ ಜೂನ್‌ 24ರಿಂದ ಅಗ್ನಿಪಥ್‌ ಯೋಜನೆಯಡಿಯೇ ನೇಮಕಾತಿ ಪ್ರತಿಕ್ರಿಯೆ ಆರಂಭ ಎಂದು ಘೋಷಣೆ ಮಾಡಿತು.

ಹಿಂದೆಯೂ ಹೀಗೇ ಆಗಿತ್ತು
ಹಿಂದೆ ಮೋದಿ ಸರಕಾರ ಕೃಷಿ ಕಾಯಿದೆಯನ್ನು ಜಾರಿಗೆ ತಂದಾಗಲೂ ಇದೇ ರೀತಿ ಆಗಿತ್ತು. ಭಾರತೀಯ ಕಿಸಾನ್‌ ಯೂನಿಯನ್‌ ನೇತೃತ್ವದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಸಾವು ನೋವುಗಳು ಸಂಭವಿಸಿದ ಬಳಿಕವಷ್ಟೇ ಕೇಂದ್ರ ಸರಕಾರ ವಿವಾದಾತ್ಮಕ ಕಾಯಿದೆಯನ್ನು ಹಿಂದಕ್ಕೆ ಪಡೆದುಕೊಂಡಿತು. ಹಾಗಿದ್ದರೆ ಅಷ್ಟು ದೊಡ್ಡ ಮಟ್ಟದ ಹಿಂಸಾಚಾರ ನಡೆಯುವ ಮುನ್ನವೇ ಮರುವಿಮರ್ಶೆ ಮಾಡಲಿಲ್ಲ ಯಾಕೆ ಎನ್ನುವ ಪ್ರಶ್ನೆ ಸಹಜವಾಗಿ ಕಾಡಿತ್ತು.

ಕೃಷಿ ಕಾಯಿದೆಗಳನ್ನು ಹಿಂದೆಗೆದುಕೊಳ್ಳುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯಿದೆಯ ಒಳಿತಿನ ಬಗ್ಗೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲರಾದೆವು ಎಂದು ಒಪ್ಪಿಕೊಂಡಿದ್ದರು. ಈಗ ಅಗ್ನಿಪಥ್‌ ಯೋಜನೆಯ ವಿಚಾರದಲ್ಲೂ ಕೇಂದ್ರ ಸರಕಾರ ಮುಂದಾಲೋಚನೆ ಇಲ್ಲದೆ ನಡೆದುಕೊಂಡಂತೆ ತೋರುತ್ತಿದೆ. ಸೇನೆ ಸೇರುವ ಅವಕಾಶಕ್ಕಾಗಿ ಕಾಯುತ್ತಿರುವ ಯುವಕರಿಗೆ ಅದರ ಸಾಧಕಗಳನ್ನು ಸರಿಯಾಗಿ ತಿಳಿಸುವಲ್ಲಿ ಸರಕಾರ ವಿಫಲವಾದಂತೆ ತೋರುತ್ತಿದೆ. ದಿನಕ್ಕೆರಡು ಬಾರಿಯಂತೆ ನೀಡುತ್ತಿರುವ ಸ್ಪಷ್ಟೀಕರಣ, ಹೊಸ ಭರವಸೆಗಳು ಇದನ್ನು ಬೆಟ್ಟು ಮಾಡಿ ತೋರಿಸಿದೆ.

ಹೀಗಾಗಿ ಸರಕಾರ ಈ ಯೋಜನೆಯ ಎಲ್ಲ ಲೋಪದೋಷಗಳ ಬಗ್ಗೆ ಇನ್ನೊಂದು ಸುತ್ತಿನ ಪರಾಮರ್ಶೆ ನಡೆಸಿ ಹೊಸ ವಿನ್ಯಾಸದೊಂದಿಗೆ ಅಗ್ನಿಪಥವನ್ನು ಮಂಡಿಸಬೇಕಾಗಿದೆ. ಯುವಕರಿಗೆ ಸೇವಾ ಭದ್ರತೆಯ ಬಗ್ಗೆ ಭರವಸೆ ಮೂಡಿಸಬೇಕಾಗಿದೆ. ಹಾಗಾದರೆ ಮಾತ್ರ ಶಾಂತಿಪಥ ನಿರ್ಮಾಣವಾಗಬಹುದು.

ಇದನ್ನೂ ಓದಿ| ಅಗ್ನಿವೀರರಿಗಾಗಿ ಮತ್ತೊಂದು ಘೋಷಣೆ; ರಕ್ಷಣಾ ಇಲಾಖೆ ಹುದ್ದೆಗಳಲ್ಲೂ ಶೇ.10 ರಷ್ಟು ಮೀಸಲಾತಿ

Exit mobile version