Site icon Vistara News

ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್‌ ಅಸ್ತ್ರ; ಎನ್‌ಎಸ್‌ಎ ಅಜಿತ್‌ ದೋವಲ್‌ ಪ್ರತಿಪಾದನೆ

Ajit Doval

ನವ ದೆಹಲಿ: ಅಗ್ನಿಪಥ್‌ ಸ್ವತಂತ್ರ ಯೋಜನೆಯಲ್ಲ. ಇದನ್ನು ಏಕಾಏಕಿ ಜಾರಿಗೊಳಿಸಿದ್ದೂ ಅಲ್ಲ. ಹಲವು ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸಿ, ಸಮಗ್ರವಾಗಿ ಪರಿಶೀಲಿಸಿ ಘೋಷಣೆ ಮಾಡಲಾಗಿದೆ. ಯೋಜನೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಹಿಂಸಾತ್ಮಕ ಪ್ರತಿಭಟನೆಯನ್ನು ಸಹಿಸಿಕೊಳ್ಳುವುದೂ ಇಲ್ಲ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ.

ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ ಜಾರಿಯಾದ ಬೆನ್ನಲ್ಲೇ ಅದರ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ಯೋಜನೆ ಬಗ್ಗೆ ಅನೇಕ ತಪ್ಪುಕಲ್ಪನೆಗಳು ಎದ್ದಿವೆ. ಅದಕ್ಕೆಲ್ಲ ಕೇಂದ್ರ ಸರ್ಕಾರ ಸ್ಪಷ್ಟನೆಗಳನ್ನು ಕೊಟ್ಟಿದೆ. ಹಾಗೆಯೇ, ಅಗ್ನಿಪಥ್‌ ಯೋಜನೆ ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಘೋಷಿಸಲಾಗಿದೆ. ಅಗ್ನಿವೀರರ ನೇಮಕಾತಿ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಇದೇ ಹೊತ್ತಲ್ಲಿ ಅಜಿತ್‌ ದೋವಲ್‌ ಎಎನ್‌ಐ ಸುದ್ದಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟು, ಅಗ್ನಿಪಥ್‌ ಯೋಜನೆ ಮತ್ತು ಸೇನೆಯ ಇನ್ನಿತರ ವಿಚಾರಗಳ ಬಗ್ಗೆ ಸಮಗ್ರವಾಗಿ ಮಾತನಾಡಿದ್ದಾರೆ.

ʼಪ್ರಧಾನಿ ನರೇಂದ್ರ ಮೋದಿಯವರ ಪ್ರಥಮ ಆದ್ಯತೆ ಭಾರತವನ್ನು ಬಲಿಷ್ಠಗೊಳಿಸುವುದು ಮತ್ತು ಭದ್ರಪಡಿಸುವುದು. 2014ರಲ್ಲಿ ಅವರು ಮೊದಲ ಬಾರಿಗೆ ಪ್ರಧಾನಿ ಹುದ್ದೆಗೆ ಏರಿದಾಗಿನಿಂದಲೂ ಇದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾದ ಯೋಜನೆ ಈ ಅಗ್ನಿಪಥ್‌. ಇಡೀ ಜಗತ್ತಿನಲ್ಲಿ ಯುದ್ಧದ ಮಾದರಿ ಬದಲಾಗುತ್ತಿದೆ. ಕಣ್ಣಿಗೆ ಕಾಣದ ಶತ್ರುಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬರುತ್ತಿದೆ. ಅದಕ್ಕೆ ನಮ್ಮ ಸೇನೆಯೂ ಸಜ್ಜಾಗಬೇಕು. ನಾವು ನಾಳೆಯ ಬಗ್ಗೆ ಯೋಚಿಸಿ, ಸಿದ್ಧರಾಗಬೇಕು. ಹೆಚ್ಚೆಚ್ಚು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಹೊಸ ಮಾದರಿ ಸೇನಾ ಉಪಕರಣಗಳನ್ನು ಬಳಕೆ ಮಾಡಲು ಸೇನೆಯಲ್ಲಿ ಯುವಜನರು, ಚಾಣಾಕ್ಷರ ಅಗತ್ಯ ತುಂಬ ಇರುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪಥ್‌ ಅತ್ಯಂತ ಸೂಕ್ತʼ ಎಂದು ದೋವಲ್‌ ಹೇಳಿದರು.

ಸೇನಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದಕ್ಕೆ ಮತ್ತು ನವೀಕರಣ ಮಾಡಲು ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆ ಬಗ್ಗೆ ಮಾತನಾಡಿದ ಅಜಿತ್‌ ದೋವಲ್‌ “ಇಡೀ ಸೈನ್ಯಕ್ಕೆ ನಾಲ್ವರು ಮುಖ್ಯಸ್ಥರು ಇರುತ್ತಾರೆ. ಭವಿಷ್ಯದ ದೃಷ್ಟಿಯಿಂದ ಸೇನೆಗೆ ಖಂಡಿತ ಹೊಸ ತಂತ್ರಜ್ಞಾನವುಳ್ಳ ಉಪಕರಣಗಳ ಅಗತ್ಯವಿದೆ. ಆರ್ಮಿ ವ್ಯವಸ್ಥೆ ಮತ್ತು ಸ್ವರೂಪದಲ್ಲಿ ಬದಲಾವಣೆಯಾಗಬೇಕು. ಅಷ್ಟೇ ಅಲ್ಲ, ಮಾನವ ಶಕ್ತಿ, ನೀತಿ ರಚನೆಯಲ್ಲೂ ಬದಲಾವಣೆ ಬೇಕುʼ ಎಂದು ಹೇಳಿದರು.

“ಭದ್ರತೆ ಎಂಬುದು ಒಂದು ಕ್ರಿಯಾತ್ಮಕ ಪರಿಕಲ್ಪನೆ. ಹೀಗಾಗಿ ಯಾವಾಗಲೂ ಒಂದೇ ಸ್ವರೂಪದಲ್ಲಿ, ಸ್ಥಿರವಾಗಿ ಇರಬೇಕು ಎಂದುಕೊಳ್ಳುವುದು ತಪ್ಪಾಗುತ್ತದೆ. ಸಂದರ್ಭ, ಸನ್ನಿವೇಶ ಮತ್ತು ಹೋರಾಟ-ಯುದ್ಧದ ಮಾದರಿಗೆ ಅನುಗುಣವಾಗಿ, ರಾಷ್ಟ್ರದ ಹಿತಾಸಕ್ತಿ ಮತ್ತು ಆಸ್ತಿಯನ್ನು ರಕ್ಷಿಸಲು ಭದ್ರತಾ ವ್ಯವಸ್ಥೆಯಲ್ಲೂ ಅಗತ್ಯ ಬದಲಾವಣೆ ಮಾಡಲೇಬೇಕುʼ ಎಂದೂ ದೋವಲ್ ತಿಳಿಸಿದರು.

ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ, ಅಗ್ನಿಪಥ್‌ ಚರ್ಚೆ

ರೆಜಿಮೆಂಟಲ್‌ ವ್ಯವಸ್ಥೆ ಹಾಳಾಗದು
ಇಡೀ ಸೇನೆಯಲ್ಲಿ ಅಗ್ನಿವೀರರೇ ತುಂಬಿಬಿಡುವುದಿಲ್ಲ. ಹಿರಿಯ ಅಧಿಕಾರಿಗಳು, ವಿವಿಧ ಶ್ರೇಣಿಯ ಸೇನಾ ಪ್ರಮುಖರು ಇದ್ದೇ ಇರುತ್ತಾರೆ. ಅಗ್ನಿವೀರರಾಗಿ ಸೇನೆಗೆ ಸೇರ್ಪಡೆಯಾದ ಬಳಿಕ ಅವರು ಕಠಿಣ ತರಬೇತಿ ಪಡೆಯುತ್ತಾರೆ. ಸಮಯ ಕಳೆದಂತೆ ಅನುಭವ ಪಡೆಯುತ್ತಾರೆ. ಅವರೂ ಅನುಭವಿಗಳಾಗುತ್ತ ಹೋಗುತ್ತಾರೆ. ಮತ್ತೆ ನಾಲ್ಕು ವರ್ಷಗಳ ನಂತರ ಅತ್ಯಂತ ದಕ್ಷರು ಎನ್ನಿಸಿಕೊಂಡವರು ಮಾತ್ರ ಸೇನೆಯಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅವರು ನಾಲ್ಕು ವರ್ಷಗಳ ಅನುಭವಗಳ ಜತೆ ಮತ್ತಷ್ಟು ತರಬೇತಿಯನ್ನು ಪಡೆಯುತ್ತಾರೆ ಎಂದು ಹೇಳಿದ ಅಜಿತ್‌ ದೋವಲ್‌, ʼಇದೀಗ ಸೇನೆಯಲ್ಲಿ ಇರುವ ರೆಜಿಮೆಂಟಲ್‌ ವ್ಯವಸ್ಥೆಗೆ ಅಗ್ನಿವೀರರಿಂದ ಯಾವುದೇ ತೊಡಕಾಗುವುದಿಲ್ಲ. ಇಷ್ಟು ದಿನಗಳಂತೆ ಅದು ಮುಂದುವರಿಯಲಿದೆʼ ಎಂದೂ ತಿಳಿಸಿದರು.

ಸಕಾರಾತ್ಮಕವಾಗಿ ಆಲೋಚಿಸಿ
ಅಗ್ನಿಪಥ್‌ ಯೋಜನೆ ಬಗ್ಗೆ ಸಕಾರಾತ್ಮಕವಾಗಿ ಆಲೋಚನೆ ಮಾಡುವಂತೆ ಅಜಿತ್‌ ದೋವಲ್‌ ಯುವಜನರಿಗೆ ಕರೆ ಕೊಟ್ಟಿದ್ದಾರೆ. ʼಅಗ್ನಿಪಥ್‌ ಬಗ್ಗೆ ನೆಗೆಟಿವ್‌ ವಿಚಾರಗಳನ್ನು ನಂಬಬೇಡಿ. ಈ ದೇಶದ ನಾಯಕತ್ವದ ಮೇಲೆ ನಂಬಿಕೆಯಿಡಿ ಮತ್ತು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಎಂದೂ ಹೇಳಿದ್ದಾರೆ. ʼಯುವಜನರು ಕೇವಲ ಹಣಕ್ಕಾಗಿ ಸೇನೆ ಸೇರುವುದಿಲ್ಲ. ಅವರಲ್ಲಿ ದೇಶಭಕ್ತಿ ಇರುತ್ತದೆ. ದೇಶಕ್ಕಾಗಿ ನಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂಬ ಆಸೆ ಇರುತ್ತದೆ. ಅಂಥವರು ಖಂಡಿತ ಅಗ್ನಿಪಥ್‌ನ್ನು ವಿರೋಧಿಸುವುದಿಲ್ಲ. ಆದರೆ ಯಾರಲ್ಲಿ ದೇಶ ಸೇವೆಯ ತುಡಿತವಿಲ್ಲದೆ ಕೇವಲ ಹಣಕ್ಕಾಗಿ ಸೇನೆ ಸೇರಲು ಬಯಸುತ್ತಾರೋ ಅವರಿಗೆ ಈ ಯೋಜನೆ ಇಷ್ಟವಾಗುವುದಿಲ್ಲ. ಅಗ್ನಿಪಥ್‌ ಸ್ಕೀಮ್‌ನಡಿ ಸೇನೆ ಸೇರಿ, ನಾಲ್ಕು ವರ್ಷ ಸೇವೆ ಸಲ್ಲಿಸಿ, ನಿವೃತ್ತರಾದ ಬಳಿಕವೂ ಅವರಿಗೆ ವಯಸ್ಸಿರುತ್ತದೆ. ದುಡಿಮೆಗೆ ಅನೇಕ ದಾರಿಗಳು ಇರುತ್ತವೆ. ಅಗ್ನಿವೀರರಿಗಾಗಿಯೇ ಕೇಂದ್ರ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಘೋಷಿಸಿದೆ. ಮುಂದೇನು ಎಂಬ ಚಿಂತೆಯಿಲ್ಲದೆ, ಉತ್ತಮ ಬದುಕು ಸಾಗಿಸಬಹುದುʼ ಎಂದು ಅಜಿತ್‌ ದೋವಲ್‌ ಹೇಳಿದ್ದಾರೆ.

ಇದನ್ನೂ ಓದಿ: ಮೂರೂ ಸೇನಾ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ, ಅಗ್ನಿಪಥ್‌ ಚರ್ಚೆ

Exit mobile version