ಸಿಕಂದರಾಬಾದ್: ದೇಶದ ಏಳು ರಾಜ್ಯಗಳಲ್ಲಿ ಭುಗಿಲೆದ್ದಿರುವ ಅಗ್ನಿಪಥ್ ಪ್ರತಿಭಟನೆಗೆ (Agnipath Protest) ಮೊದಲ ಜೀವ ಬಲಿಯಾಗಿದೆ. ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ದೊಂಬಿ ನಡೆಸಿದ ಯುವಕರ ತಂಡದ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಮೃತನನ್ನು ವಾರಂಗಲ್ ಜಿಲ್ಲೆಯ ದಾಮೋದರ್ ಎಂದು ಗುರುತಿಸಲಾಗಿದೆ.
ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಮುಂಜಾನೆಯಿಂದಲೇ ರಣರಂಗದ ಸ್ಥಿತಿ ನಿರ್ಮಾಣವಾಗಿತ್ತು. ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ಸೇರಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಬಳಿಕ ರೈಲುಗಳಿಗೆ ಬೆಂಕಿ ಹಚ್ಚಲು ಮುಂದಾದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದರು. ಈ ನಡುವೆ ಪೊಲೀಸ್ ಫೈರಿಂಗ್‌ಗೆ ಆದೇಶ ನೀಡಲಾಗಿತ್ತು. ಅದರಲ್ಲಿ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.
ಪೂರ್ವಯೋಜಿತ ಕೃತ್ಯ
ಸಿಕಂದರಾಬಾದ್‌ನಲ್ಲಿ ದೊಡ್ಡ ಮಟ್ಟದ ದೊಂಬಿ ನಡೆಸಿದ ಪ್ರತಿಭಟನಾಕಾರರು ಮೊದಲೇ ಸಜ್ಜಿತರಾಗಿ ಬಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಸುಮಾರು ೫೦೦೦ಕ್ಕೂ ಅಧಿಕ ಮಂದಿ ರೈಲು ನಿಲ್ದಾಣಕ್ಕೆ ಧಾವಿಸಿದ್ದರು. ಸಾಕಷ್ಟು ಜನರು ರೈಲಿನಲ್ಲಿ ಇದ್ದಾಗಲೇ ಪ್ರತಿಭಟನಾಕಾರರು ದಾಳಿ ನಡೆಸಿದರು. ದಾಳಿಗೆ ಬೆಚ್ಚಿದ ಪ್ರಯಾಣಿಕರು ಕಂಡಕಂಡಲ್ಲಿ ಓಡಿ ತಪ್ಪಿಸಿಕೊಂಡರು.
ಪೆಟ್ರೋಲ್ ಬಾಂಬ್ ಸಿಕ್ಕಿದೆ
ಈ ನಡುವೆ ರೈಲಿನ ಒಳಗಡೆ ಸೀಟೊಂದರ ಮೇಲೆ ಪೆಟ್ರೋಲ್ ಬಾಂಬ್ ಒಂದು ಪತ್ತೆಯಾಗಿದ್ದು, ದುಷ್ಕರ್ಮಿಗಳು ಇದನ್ನು ಹೊರಗಿನಿಂದ ಎಸೆದಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇದು ಸ್ಫೋಟಗೊಳ್ಳುತ್ತಿದ್ದರೆ ಪ್ರಯಾಣಿಕರ ಸಹಿತವಾಗಿ ಬೋಗಿ ಬೆಂಕಿಗೆ ಆಹುತಿಯಾಗುವ ಅಪಾಯವಿತ್ತು.
ಹಿಂಸೆಗೆ ತತ್ತರ
ಸಿಕಂದರಾಬಾದ್ ರೈಲು ನಿಲ್ದಾಣದ ಒಂದು ಮತ್ತು ಎರಡನೇ ಪ್ಲಾಟ್‌ಫಾರಂನಲ್ಲಿ ದೊಡ್ಡ ಮಟ್ಟದ ದೊಂಬಿ ನಡೆದಿದೆ. ಕಲ್ಲು ಮತ್ತು ದೊಣ್ಣೆಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ಅಲ್ಲಿನ ಅಂಗಡಿಗಳನ್ನು ಮೊದಲು ಪುಡಿಗಟ್ಟಿದರು. ರೈಲುಗಳಿಗೆ ಕಲ್ಲುತೂರಾಟ ನಡೆಸಿದರು. ಕೋಲ್ಕೊತಾಗೆ ಹೊರಟಿದ್ದ ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ ಮತ್ತು ಅಜಂತಾ ಎಕ್ಸ್‌ಪ್ರೆಸ್‌ನ ಕೆಲವೊಂದು ಬೋಗಿಗಳಿಗೆ ಹಾನಿ ಮಾಡಲಾಗಿದೆ.
ಪ್ರತಿಭಟನಾಕಾರರು ರೈಲ್ವೆ ಕಾರ್ಗೊಗಳನ್ನು ಹೊರಗೆಳೆದು ಟ್ರ್ಯಾಕ್‌ಗೆ ಹಾಕಿ ಬೆಂಕಿ ಹಚ್ಚಿದರು. ಕೆಲವು ಪ್ರಯಾಣಿಕರ ವಸ್ತುಗಳಿಗೂ ಬೆಂಕಿ ಹಚ್ಚಲಾಗಿದೆ. ಇವರು ಹಚ್ಚಿದ ಬೆಂಕಿಯನ್ನು ನಂದಿಸಲು ಸುಮಾರು ಎರಡು ಗಂಟೆಗಳೇ ಬೇಕಾಯಿತು. ಇಷ್ಟೇ ಅಲ್ಲ, ರೈಲು ನಿಲ್ದಾಣದ ಹೊರಗೂ ಪ್ರತಿಭಟನಾಕಾರರು ಭಾರಿ ಹಾನಿ ಮಾಡಿದ್ದು, ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.