ನವ ದೆಹಲಿ: ಅಗ್ನಿಪಥ್ ವಿರುದ್ಧ ಅಗ್ನಿಜ್ವಾಲೆ (Agnipath protest) ಸೃಷ್ಟಿಸುತ್ತಿರುವ ಯುವಕರಿಗೆ ಮುಂದೆ ಸೇನೆ ಸೇರಲು ಅವಕಾಶ ಸಿಗದೆ ಹೋಗಬಹುದು ಎಂಬ ಎಚ್ಚರಿಕೆಯ ಮಾತೊಂದು ಕೇಳಿಬಂದಿದೆ. ಪ್ರಸಕ್ತ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಸೇನೆ ಸೇರಲು ಸಿದ್ಧತೆ ನಡೆಸುತ್ತಿರುವವರು ಎಂದು ಹೇಳಲಾದ ಯುವಕರು ಭಾರಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಒಂದೊಮ್ಮೆ ಈ ವಿವಾದವೆಲ್ಲ ತಣ್ಣಗಾಗಿ ಸೇನಾ ನೇಮಕಾತಿ ಆರಂಭವಾದರೂ ಆಗ ಈ ಹಿಂಸಾನಿರತರಿಗೆ ಅವಕಾಶ ಸಿಗದೆ ಹೋಗಬಹುದು ಎಂದು ಎಚ್ಚರಿಸಲಾಗಿದೆ.
ಈ ಎಚ್ಚರಿಕೆಯ ಮಾತನ್ನು ಆಡಿದವರು ವಾಯು ಸೇನಾ ಮುಖ್ಯಸ್ಥರಾಗಿರುವ ವಿ.ಆರ್. ಚೌಧರಿ. ಈಗ ದೊಡ್ಡ ಮಟ್ಟದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಯುವಕರು ಮುಂದೆ ಸೇನೆ ಸೇರ್ಪಡೆಯ ನೇಮಕಾತಿ ನಡೆಯುವ ಸಂದರ್ಭದಲ್ಲಿ ದೊಡ್ಡ ಬೆಲೆಯನ್ನೇ ತೆರಬೇಕಾದೀತು ಎಂದು ಹೇಳಿದ್ದಾರೆ.
ಯಾವುದೇ ಅಭ್ಯರ್ಥಿ ಸೇನೆಯನ್ನು ಸೇರಬೇಕು ಎಂದರೆ ಪೊಲೀಸ್ ಕ್ಲಿಯರೆನ್ಸ್ ಅಗತ್ಯವಾಗುತ್ತದೆ. ಈಗ ದೊಂಬಿಯಲ್ಲಿ ಭಾಗವಹಿಸಿದವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ್ದರೆ ಅವರಿಗೆ ಕ್ಲಿಯರೆನ್ಸ್ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರಿಗೆ ನೇಮಕಾತಿಯಲ್ಲಿ ಅವಕಾಶ ದೊರೆಯದೆ ಹೋಗಬಹುದು ಎಂದು ಚೌಧರಿ ಹೇಳಿದರು.
ನಾವು ಈ ತರದ ಪ್ರತಿಭಟನೆಯನ್ನು ನಿರೀಕ್ಷೆ ಮಾಡಿರಲೇ ಇಲ್ಲ. ನಾವು ಇಂಥ ಹಿಂಸಾಚಾರವನ್ನು ಖಂಡಿಸುತ್ತೇವೆ. ಇದು ಪರಿಹಾರವಲ್ಲ ಎಂದ ಅವರು, ಸೇನೆ ನೇಮಕಾತಿಯಲ್ಲಿ ಪೊಲೀಸ್ ವೆರಿಫಿಕೇಶನ್ ಅತ್ಯಂತ ಪ್ರಮುಖ ಭಾಗವಾಗಿರುತ್ತದೆ. ಇಂಥ ದೊಂಬಿಯಲ್ಲಿ ಭಾಗವಹಿಸಿದವರಿಗೆ ಕ್ಲಿಯರೆನ್ಸ್ ಸಿಗದಿರಬಹುದು ಎಂದರು ಚೌಧರಿ.
ಅಗ್ನಿಪಥ್ ಅತ್ಯುತ್ತಮ ಯೋಜನೆಯಾಗಿದೆ ಎಂದು ಹೇಳಿದ ಅವರು, ಯಾರಾದರೂ ಯುವಕರಿಗೆ ಇದರ ಬಗ್ಗೆ ಗೊಂದಲಗಳಿದ್ದರೆ ಸಮೀಪದ ಮಿಲಿಟರಿ ನೆಲೆ, ವಾಯುಪಡೆ ಇಲ್ಲವೇ ನೌಕಾಪಡೆಗಳ ಕಚೇರಿಗಳಿಗೆ ಭೇಟಿ ನೀಡಿ ಸಂಶಯ ಪರಿಹರಿಸಿಕೊಳ್ಳಬಹುದು ಎಂದರು.
ಎಲ್ಲ ಯುವಕರು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಯೋಜನೆಯ ಸಂಪೂರ್ಣ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯೋಜನೆಯ ಲಾಭವನ್ನು ಪಡೆಯಬೇಕು ಎಂದರು ಚೌಧರಿ. ಇದನ್ನೂ ಓದಿ| Agnipath : ಸೇನೆ ಸೇರಲು ಯುವಕರಿಗೆ ಸುವರ್ಣ ಅವಕಾಶ; ಅಗ್ನಿಪಥ್ ಯೋಜನೆಗೆ ಕೇಂದ್ರದ ಅನುಮೋದನೆ