ನವ ದೆಹಲಿ: ಅಗ್ನಿಪಥ್ ಯೋಜನೆಗೆ ಎದುರಾಗಿರುವ ವಿರೋಧ ಕೇಂದ್ರ ಸರಕಾರದ ನಿದ್ದೆಗೆಡಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಸೇನೆಗೆ ಸೇರುವ ಆಸಕ್ತ ಯುವಕರು ನಿರ್ಮಿಸಿರುವ ಹಿಂಸಾಪಥದಿಂದ ರಕ್ಷಣೆ ಹೇಗೆ ಎನ್ನುವುದು ಒಂದು ಕಡೆಯಾದರೆ, ಇನ್ನೊಂದು ಕಡೆಯಲ್ಲಿ ಈಗಾಗಲೇ ಘೋಷಣೆಯಾಗಿರುವ ಯೋಜನೆಯ ಲೋಪದೋಷಗಳ ಅವಲೋಕಕ್ಕೂ ಸರಕಾರ ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದೇಶದ ದೊಡ್ಡ ಪ್ರಮಾಣದ ಯುವಜನತೆಗೆ ಸೇನೆ ಸೇರಲು ಅವಕಾಶ ನೀಡುವುದು, ಯುವ ಶಕ್ತಿ ಮತ್ತು ತಂತ್ರಜ್ಞಾನ ಸಜ್ಜಿತರಾದವರ ಮೂಲಕ ಸೈನ್ಯವನ್ನು ಬಲಾಢ್ಯಗೊಳಿಸುವ ಯೋಜನೆಯನ್ನು ಅವಸರದಲ್ಲಿ ಘೋಷಿಸಿದ ಕೇಂದ್ರ ಸರಕಾರ ಈಗ ತೀವ್ರ ವಿರೋಧ ವ್ಯಕ್ತವಾದ ಬಳಿಕ ಹಲವು ಬದಲಾವಣೆಗಳನ್ನು ಪ್ರಕಟಿಸಿದೆ. ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಿದ್ದು, ಅಗ್ನಿವೀರರಾಗಿ ನಾಲ್ಕು ವರ್ಷ ಸೇವೆ ಮಾಡಿ ಮರಳಿದವರಿಗೆ ಕೇಂದ್ರ ಸಶಸ್ತ್ರ ಪಡೆಗಳು ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ಶೇ. ೧೦ರಷ್ಟು ಮೀಸಲು ಒದಗಿಸುವ ಘೋಷಣೆಯನ್ನು ಮಾಡಿದೆ. ಈ ನಡುವೆ ಅಗ್ನಿಪಥ್ ಯೋಜನೆಯ ಬಗ್ಗೆ ನಿವೃತ್ತ ಹಿರಿಯ ಯೋಧರ ನಡುವೆಯೇ ವಿಭಿನ್ನ ಅಭಿಪ್ರಾಯವಿದೆ. ಸಾಕಷ್ಟು ಬದಲಾವಣೆಯ ಅಗತ್ಯವಿದೆ ಎಂಬ ಅಭಿಪ್ರಾಯ ಹಲವರಲ್ಲಿದೆ.
ಈ ಎಲ್ಲ ಹಿನ್ನೆಲೆಯನ್ನು ಇಟ್ಟುಕೊಂಡು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ. ವಾಯುಪಡೆ ಮುಖ್ಯಸ್ಥರಾಗಿರುವ ವಿವೇಕ್ ರಾಮ್ ಚೌಧರಿ, ಭೂಸೇನಾ ಮುಖ್ಯಸ್ಥ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಮಾಲೋಚನೆಯ ಸಂದರ್ಭದಲ್ಲಿ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ
ಈ ನಡುವೆ, ಶನಿವಾರ ಅಗ್ನಿಪಥ ವಿವಾದ ಸುಪ್ರೀಂಕೋರ್ಟ್ ಕಟಕಟೆಯನ್ನು ಹತ್ತಿದೆ. ವಿಶಾಲ್ ತಿವಾರಿ ಎಂಬ ವಕೀಲರು ಈ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸಬೇಕು, ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಮತ್ತು ಎಸ್‌ಐಟಿ ರಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ| Agnipath protest: ʻಅಗ್ನಿʼಕುಂಡವಾದ ಏಳು ರಾಜ್ಯಗಳು; ಬಿಹಾರ ಡಿಸಿಎಂ ಮನೆಗೆ ಬೆಂಕಿ, ತೆಲಂಗಾಣದಲ್ಲಿ ಫೈರಿಂಗ್