ನವ ದೆಹಲಿ: ಅಗ್ನಿಪಥ್ ಯೋಜನೆ ವಿರುದ್ಧ ದೇಶಾದ್ಯಂತ ಎದ್ದಿರುವ ಅಗ್ನಿಜ್ವಾಲೆಯ ಬಗ್ಗೆ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಒಂದು ಕೊಡುಗೆಯನ್ನೂ ಪ್ರಕಟಿಸಿದ್ದಾರೆ. ಕಂಪನಿಯ ಮುಂದಿನ ನೇಮಕಾತಿಗಳಲ್ಲಿ ನಿವೃತ್ತ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು, ತರಬೇತು ಪಡೆದ, ಸಮರ್ಥ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅಗ್ನಿಪಥ್ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ತುಂಬ ಬೇಸರವಾಗಿದೆ. ಒಂದು ವರ್ಷದ ಹಿಂದೆ ಈ ಯೋಜನೆಯ ಚರ್ಚೆ ಆರಂಭಗೊಂಡಾಗಲೇ ಇದೊಂದು ಉತ್ತಮ ಯೋಜನೆ ಎಂದಿದ್ದೆ. ಶಿಸ್ತು ಮತ್ತು ಕೌಶಲದಿಂದ ಒಡಮೂಡಿದ ಅಗ್ನಿವೀರರು ಯಾವುದೇ ಉದ್ಯೋಗ ನೇಮಕಕ್ಕೆ ಸಮರ್ಥ ಆಯ್ಕೆಯಾಗಲಿದ್ದಾರೆ ಎಂದು ನಾನು ಹೇಳಿದ್ದೆ. ಇಂಥ ತರಬೇತಿ ಪಡೆದ, ಸಮರ್ಥ ಯುವಜನರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರ ಗ್ರೂಪ್ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ ಆನಂದ್ ಮಹೀಂದ್ರ.
ಅಗ್ನಿಪಥ್ ಯೋಜನೆಯಡಿ ಯುವಕರಿಗೆ ಸೇನಾ ತರಬೇತಿ ನೀಡುವುದಲ್ಲದೆ ಜೀವನ ಕೌಶಲಗಳನ್ನೂ ಕಲಿಸಲಾಗುತ್ತದೆ ಎಂದು ಈಗಾಗಲೇ ಪ್ರಕಟಿಸಲಾಗಿದೆ. ಎಸ್ಸೆಸ್ಸೆಲ್ಸಿ ಆದ ಕೂಡಲೇ ಸೇನೆ ಸೇರಿದರೆ ನಾಲ್ಕು ವರ್ಷದ ಬಳಿಕ ನಿವೃತ್ತಿಯಾಗಿ ಹೊರಬಂದ ನಂತರ ಏನು ಮಾಡುವುದು ಎನ್ನುವ ಪ್ರಶ್ನೆಗೆ ಸರಕಾರ ಕೌಶಲದ ಉತ್ತರವನ್ನು ನೀಡಿದೆ. ಜತೆಗೆ ಸೇವೆಯಲ್ಲಿ ಇರುತ್ತಲೇ ಪದವಿ ವ್ಯಾಸಂಗ ಮಾಡಲೂ ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಿಸಿದೆ.
ಹಲವಾರು ಕಂಪನಿಗಳು ಈಗಾಗಲೇ ಅಗ್ನಿವೀರರಿಗೆ ನಿವೃತ್ತಿ ನಂತರ ಉದ್ಯೋಗ ನೀಡುವುದಾಗಿ ಘೋಷಿಸಿವೆ. ಈ ನಡುವೆ, ಕೆಲವು ಬಿಜೆಪಿ ನಾಯಕರ ಅವರನ್ನು ಸೆಕ್ಯುರಿಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳುವ ಮೂಲಕ ಟ್ರೋಲ್ ಆಗಿದ್ದಾರೆ. ಆದರೆ, ಆನಂದ ಮಹೀಂದ್ರ ಅವರು, ಅಗ್ನಿವೀರರ ಸಾಮರ್ಥ್ಯ ಮತ್ತು ಕೌಶಲವನ್ನು ಗಮನಿಸಿಕೊಂಡು ಸೂಕ್ತ ಉದ್ಯೋಗ ನೀಡಲಾಗುವುದು ಎಂದು ಪ್ರಕಟಿಸಿರುವುದು ಅವರ ಬದ್ಧತೆಯನ್ನು ತೋರಿಸಿದೆ.
ಇದನ್ನೂ ಓದಿ| Agnipath | ಅಗ್ನಿಪಥ್ ಮೂಲಕ ಮೊದಲ ಬಾರಿಗೆ ನೌಕಾಪಡೆಗೆ ಮಹಿಳಾ ನಾವಿಕರ ನೇಮಕ