ನವದೆಹಲಿ: ಏಪ್ರಿಲ್ 17, ಸೋಮವಾರದಿಂದ ಏ.26ವರೆಗೊ ನಡೆಯಲಿರುವ ಕಂಪ್ಯೂಟರ್ ಆಧರಿತ ಅಗ್ನಿವೀರ್ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ(CEE)ಗೆ ಮಹಾರಾಷ್ಟ್ರ, ಗುಜರಾತ್, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯುಗಳ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಹಾಜರಾಗುತ್ತಿದ್ದಾರೆ(Agniveer Recruitment).
ಅಗ್ನಿವೀರ್ ನೇಮಕಾತಿಯನ್ನು ಪರಿಷ್ಕರಿಸಲಾಗಿದೆ. ಅರ್ಜಿ ಹಾಕಿದ ಎಲ್ಲ ಅಭ್ಯರ್ಥಿಗಳು ಮೊದಲು ಸಿಇಇ ಬರೆಯಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದವರವನ್ನು ಫಿಜಿಕಲ್ ಮತ್ತು ಮೆಡಿಕಲ್ ಪರೀಕ್ಷೆಗಳಿಗೆ ಆಹ್ವಾನಿಸಲಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.
ಜಾಯಿನ್ ಇಂಡಿಯನ್ ಆರ್ಮಿ(JIA) ಜಾಲತಾಣ ಮೂಲಕ ಅಗ್ನಿವೀರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಕ್ರಿಯೆಯನ್ನು ಫೆಬ್ರವರಿ 16ರಿಂದ ಮಾರ್ಚ್ 15ರವರೆಗೆ ನಡೆಸಲಾಗಿತ್ತು. ಇನ್ನೂ ಹೆಚ್ಚಿನ ಪಾರದರ್ಶಕತೆಯನ್ನು ತರುವುದಕ್ಕಾಗಿ ಜೆಐಎ ಜಾಲತಾಣವನ್ನು ಈಗ ಡಿಜಿಲಾಕರ್ ಜತೆ ಲಿಂಕ್ ಮಾಡಲಾಗಿದೆ.
ಭಾರತೀಯ ಸೇನೆಯ ಪುಣೆ ನೇಮಕಾತಿ ವಿಭಾಗದಲ್ಲಿ ಸುಮಾರು 2.5 ಲಕ್ಷ ಅಭ್ಯರ್ಥಿಗಳು ಕಂಪ್ಯೂಟರ್ ಆಧರಿತ ಪರೀಕ್ಷೆಯನ್ನು ಮಹಾರಾಷ್ಟ್ರದ 35, ಗೋವಾದಲ್ಲಿ ಒಂದು, ಗುಜರಾತ್‌ನಲ್ಲಿ 12 ಕೇಂದ್ರಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. 2.5 ಲಕ್ಷ ಅಭ್ಯರ್ಥಿಗಳ ಪೈಕಿ 1.4 ಲಕ್ಷ ಅಭ್ಯರ್ಥಿಗಳು ಮಹಾರಾಷ್ಟ್ರದವರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ 176 ಕಡೆ ಆನ್‌ಲೈನ್ ಸಿಇಇ ನಡೆಸಲಾಗುತ್ತಿದೆ. ಅಭ್ಯರ್ಥಿಗಳ ಐದು ಪರೀಕ್ಷಾ ಕೇಂದ್ರಗಳ ಆಯ್ಕೆಯನ್ನು ನೀಡಲಾಗುತ್ತದೆ. ಆ ಐದು ಕೇಂದ್ರಗಳ ಪೈಕಿ ಒಂದು ಕಡೆ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ. ಆನ್‌ಲೈನ್ ಸಿಇಇಗೆ 500 ಪ್ರವೇಶ ಶುಲ್ಕವಿದ್ದು, ಈ ಪೈಕಿ 250 ರೂ. ಸೇನೆಯೇ ಭರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿವೀರ್ ಆನ್‌ಲೈನ್ ಸಿಇಇ ವೇಳಾ ಪಟ್ಟಿ ಹೀಗಿದೆ…
ಏಪ್ರಿಲ್ 17 ಮತ್ತು 21 ರಂದು ಸೈನಿಕರ ಸಾಮಾನ್ಯ ಡ್ಯೂಟಿ. ಏಪ್ರಿಲ್ 24ರಂದು ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ವುಮೆನ್ ಮಿಲಿಟರಿ ಪೊಲೀಸ್ ಮತ್ತು ಟ್ರೇಡ್ಸ್‌ಮನ್, ಏಪ್ರಿಲ್ 25ರಂದು ಟೆಕ್ನಿಕಲ್, ನರ್ಸಿಂಗ್ ಅಸಿಸ್ಟಂಟ್ ಮತ್ತು ನರ್ಸಿಂಗ್ ಅಸಿಸ್ಟಂಟ್ ವೆಟರ್ನರಿ ಅಗ್ನಿವೀರ್ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 26ರಂದು ಧಾರ್ಮಿಕ ಬೋಧಕರು, ಕಿರಿಯ ಅಧಿಕಾರಿ, ಫಾರ್ಮಾಸಿಸ್ಟ್, ಹವಾಲ್ದಾರ್ ಸರ್ವೇಯರ್‌ಗಾಗಿ ಪರೀಕ್ಷೆ ನಡೆಯಲಿದೆ.
ಅಗ್ನಿಪಥ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಅಗ್ನಿಪಥ ಯೋಜನೆಯ (Agnipath scheme) ಸಿಂಧುತ್ವವನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ವಜಾ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಗ್ನಿಪಥವು ಸಿಂಧುತ್ವವನ್ನು ಹೊಂದಿದ್ದು, ನಿರಂಕುಶವಾಗಿಲ್ಲ ಎಂದು ಹೇಳಿದೆ. ಅಲ್ಲದೇ, ಅಗ್ನಿಪಥ್ ಯೋಜನೆಯನ್ನು ಪರಿಚಯಿಸುವ ಮೊದಲು ರಕ್ಷಣಾ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯವು ಹೇಳಿತು.
ಇದನ್ನೂ ಓದಿ : Agniveer Recruitment: ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಏನಿದು?
ಹಾಗೆಯೇ, ಭಾರತೀಯ ವಾಯು ಪಡೆಯಲ್ಲಿ ಅಗ್ನಿಪಥ ಯೋಜನೆಯನ್ನು ಪರಿಚಯಿಸುವ ಮುಂಚಿನ ನೇಮಕಾತಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 17ಕ್ಕೆ ನಿಗದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಜಸ್ಟೀಸ್ ಪಿ ಎಸ್ ನರಸಿಂಹ ಮತ್ತು ಜಸ್ಟೀಸ್ ಜೆ ಬಿ ಪರ್ದಿವಾಲಾ ಅವರಿದ್ದ ಪೀಠವು ದಿಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ದಾಖಲಾಗಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನಡೆಸಿತು. ಈ ವಿಷಯದಲ್ಲಿ ನಾವು(ಕೋರ್ಟ್) ಮಧ್ಯಪ್ರವೇಶಿಸಬೇಕಾದ ಅಗತ್ಯವಿಲ್ಲ. ಇದು ಸಾರ್ವಜನಿಕ ಉದ್ಯೋಗಕ್ಕೆ ಸಂಬಂಧಿಸಿದ ವಿಷಯವಾಗಿ ಹೊರತು ಒಪ್ಪಂದದಲ್ಲ ಎಂದು ಸಿಜೆಐ ಹೇಳಿದರು.