Site icon Vistara News

Rajasthan New Districts: ಚುನಾವಣೆಗೆ ಮುನ್ನವೇ 19 ಹೊಸ ಜಿಲ್ಲೆ, 3 ವಿಭಾಗ ಘೋಷಿಸಿದ ಸಿಎಂ ಗೆಹ್ಲೋಟ್

Ahead of Assembly Polls, Rajasthan CM Ashok Gehlot Announces 19 New Districts

Ahead of Assembly Polls, Rajasthan CM Ashok Gehlot Announces 19 New Districts

ಜೈಪುರ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಒಂದೇ ಬಾರಿಗೆ 19 ನೂತನ ಜಿಲ್ಲೆಗಳು (Rajasthan New Districts) ಹಾಗೂ 3 ವಿಭಾಗಗಳನ್ನು ರಚಿಸುವ ಕುರಿತು ಗೆಹ್ಲೋಟ್‌ ಅವರು ನಿರ್ಧಾರ ಪ್ರಕಟಿಸಿದ್ದಾರೆ.

“ಜನರ ಬೇಡಿಕೆಗಳನ್ನು ಗಮನಿಸಿ ನೂತನ ಜಿಲ್ಲೆಗಳನ್ನು ಘೋಷಿಸಲಾಗಿದೆ. ನೂತನ ಜಿಲ್ಲೆಗಳ ರಚನೆ ಕುರಿತು ಪ್ರಸ್ತಾಪಗಳನ್ನು ಗಮನದಲ್ಲಿಟ್ಟುಕೊಂಡು, ಇದಕ್ಕಾಗಿ ಉನ್ನತ ಸಮಿತಿಯನ್ನು ರಚಿಸಲಾಗಿತ್ತು. ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳಂತೆ 19 ಜಿಲ್ಲೆಗಳು ಹಾಗೂ 3 ವಿಭಾಗಗಳನ್ನು ರಚಿಸಲಾಗಿದೆ” ಎಂದು ವಿಧಾನಸಭೆಯಲ್ಲಿ ತೀರ್ಮಾನ ಘೋಷಿಸುವ ವೇಳೆ ಗೆಹ್ಲೋಟ್‌ ತಿಳಿಸಿದರು.

“ರಾಜಸ್ಥಾನವು ಭೌಗೋಳಿಕವಾಗಿ ದೇಶದಲ್ಲಿಯೇ ಬೃಹತ್‌ ರಾಜ್ಯವಾಗಿದೆ. ಕೆಲವೊಂದು ಜಿಲ್ಲಾಕೇಂದ್ರಗಳು ಗ್ರಾಮಗಳಿಂದ 100ಕ್ಕೂ ಅಧಿಕ ಕಿಲೋಮೀಟರ್‌ ದೂರದಲ್ಲಿವೆ. ಜನರು ಜಿಲ್ಲಾಕೇಂದ್ರಗಳಿಗೆ ತೆರಳಲು ಹೆಚ್ಚಿನ ಸಮಯ ವ್ಯಯಿಸಬೇಕಾಗಿದೆ. ಹಾಗೆಯೇ, ಆಡಳಿತದ ದೃಷ್ಟಿಯಿಂದಲೂ ಇದು ಸಮಸ್ಯೆಯಾಗಿದೆ. ಹಾಗಾಗಿ, ಜನರ ಬೇಡಿಕೆಗಳನ್ನು ಪೂರೈಸಲು ನೂತನ ಜಿಲ್ಲೆಗಳು ಹಾಗೂ 3 ವಿಭಾಗಗಳನ್ನು ರಚಿಸಲಾಗುತ್ತಿದೆ” ಎಂದು ಹೇಳಿದರು.

ಅನೂಪ್‌ಗಢ, ಬಾಲಟೋರಾ, ಬೇವಾರ್‌, ದೀಗ್‌, ದೀದ್ವಾನ-ಕುಚಾಮನ್‌, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೆಕ್ರಿ, ಕೊಟ್‌ಪುಟ್ಲಿ-ಬೆಹ್ರೋರ್‌, ಕೈರ್ಥಾಲ್‌, ನೀಮ್‌ ಕಾ ಠಾಣಾ, ಫಲೋಡಿ, ಸುಲುಂಬರ್‌, ಸಂಚೋರ್‌ ಹಾಗೂ ಶಾಹ್‌ಪುರ ನೂತನ ಜಿಲ್ಲೆಗಳಾಗಿವೆ. ಬನ್ಸ್‌ವಾರ, ಪಾಲಿ ಹಾಗೂ ಸಿಕಾರ್‌ ನೂತನ ವಿಭಾಗಗಳಾಗಿವೆ.

ವಸುಂಧರಾ ರಾಜೆ ಟೀಕೆ

ಚುನಾವಣೆ ತಂತ್ರ ಎಂದ ಬಿಜೆಪಿ

ಅಶೋಕ್‌ ಗೆಹ್ಲೋಟ್‌ ಅವರ ತೀರ್ಮಾನದ ಕುರಿತು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣೆ ದೃಷ್ಟಿಯಿಂದ ಅಶೋಕ್‌ ಗೆಹ್ಲೋಟ್‌ ಅವರು ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ದೂರಿದೆ. “ನೂತನ ಜಿಲ್ಲೆಗಳ ಘೋಷಣೆಯು ಚುನಾವಣಾ ತಂತ್ರವಾಗಿದೆ. ಒಂದೇ ಬಾರಿಗೆ ಇಷ್ಟು ಜಿಲ್ಲೆಗಳನ್ನು ಘೋಷಿಸಿರುವುದು ಆಡಳಿತಾತ್ಮಕ ಸಮಸ್ಯೆಗಳು ಉದ್ಭವಿಸಲು ಕಾರಣವಾಗಲಿದೆ” ಎಂದು ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೆ ಟ್ವೀಟ್‌ ಮಾಡಿದ್ದಾರೆ. ರಾಜಸ್ಥಾನದಲ್ಲಿ ಸದ್ಯ 19 ಜಿಲ್ಲೆಗಳಿವೆ. ಇವುಗಳಿಗೆ 19 ನೂತನ ಜಿಲ್ಲೆಗಳು ಸೇರ್ಪಡೆಯಾಗಲಿವೆ. ರಾಜ್ಯದಲ್ಲಿ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: LPG Cylinder For Rs 500 | 500 ರೂ.ಗೆ ಸಿಗಲಿದೆ ಎಲ್‌ಪಿಜಿ ಸಿಲಿಂಡರ್‌, ಚುನಾವಣೆಗೆ ಅಶೋಕ್‌ ಗೆಹ್ಲೋಟ್‌ ಭರ್ಜರಿ ತಯಾರಿ

Exit mobile version