Site icon Vistara News

Congress President | ಖರ್ಗೆಗೆ ಜಿ-23ಯ ಮನೀಶ್‌ ತಿವಾರಿ ಬೆಂಬಲ, ಶಶಿ ತರೂರ್‌ಗೆ ಭಾರಿ ಹಿನ್ನಡೆ?

Kharge Tharoor

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ (Congress President) ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಅದರಲ್ಲೂ, ಬಂಡಾಯ ಬಣವಾದ ಜಿ-೨೩ ನಾಯಕರು ಕೂಡ ಖರ್ಗೆ ಅವರ ಪರ ಮಾತನಾಡುತ್ತಿದ್ದಾರೆ. ಹಾಗಾಗಿ, ಖರ್ಗೆ ಅವರು ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶಶಿ ತರೂರ್‌ ಅವರೇ ಖುದ್ದು ಜಿ-೨೩ ಸದಸ್ಯರಾದರೂ, ಈ ಗುಂಪಿನ ಸದಸ್ಯರೇ ಸೋನಿಯಾ ಆಪ್ತ ಖರ್ಗೆ ಪರ ಮಾತನಾಡಿದ್ದು ತರೂರ್‌ ಅವರಿಗೆ ಅಚ್ಚರಿ ಮೂಡಿಸಿದೆ ಎಂದೇ ವಿಶ್ಲೇಷಿಸಲಾಗುತ್ತದೆ.

ಜಿ-೨೩ ಬಣದ ಸದಸ್ಯ, ಸಂಸದ ಮನೀಶ್‌ ತಿವಾರಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ಘೋಷಿಸಿದ್ದಾರೆ. “ಎಲ್ಲ ಅಂಶಗಳನ್ನು ಕೂಲಂಕಷವಾಗಿ ಗಮನಿಸಿದರೆ, ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷ ಸ್ಥಾನಕ್ಕೆ ಸಮಂಜಸ ಎನಿಸುತ್ತಾರೆ. ಕಾಂಗ್ರೆಸ್‌ ಸೇವೆಗೆ ಅವರು ೫೦ ವರ್ಷ ಮುಡಿಪಾಗಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಖರ್ಗೆ ಅವರಂತಹ ಭರವಸೆಯ ಕೈಗಳ ಅಗತ್ಯವಿದೆ” ಎಂದು ತಿಳಿಸಿದ್ದಾರೆ.

ಗೆಹ್ಲೋಟ್‌ ಸಹ ಖರ್ಗೆ ಪರ

ಮೊದಲು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ನಂತರ ರಾಜಸ್ಥಾನದ ಮುಖ್ಯಮಂತ್ರಿಗೆ ಗಾದಿಗೆ ತೃಪ್ತಿಪಟ್ಟ ಅಶೋಕ್‌ ಗೆಹ್ಲೋಟ್‌ ಅವರು ಖರ್ಗೆ ಅವರನ್ನು ಬೆಂಬಲಿಸಿದ್ದಾರೆ. “ಪಕ್ಷಕ್ಕೆ ಖರ್ಗೆ ಅವರು ಸದ್ಯದ ಅವಶ್ಯಕತೆ ಹಾಗೂ ಭರವಸೆ ಆಗಿದ್ದಾರೆ. ಅವರಿಂದ ನಮ್ಮ ಪಕ್ಷವು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ” ಎಂದಿದ್ದಾರೆ. ಖರ್ಗೆ ಅವರಿಗೆ ಕಾಂಗ್ರೆಸ್‌ ನಾಯಕರಾದ ಎ.ಕೆ.ಆ್ಯಂಟನಿ, ಅಂಬಿಕಾ ಸೋನಿ, ಅಜಯ್‌ ಮಕೇನ್‌, ಭೂಪಿಂದರ್‌ ಸಿಂಗ್‌ ಹೂಡಾ, ದಿಗ್ವಿಜಯ್‌ ಸಿಂಗ್‌, ಸಲ್ಮಾನ್‌ ಖುರ್ಷಿದ್‌, ರಾಜೀವ್‌ ಶುಕ್ಲಾ ಸೇರಿ ಹಲವರ ಬೆಂಬಲವಿದೆ. ಹಾಗಾಗಿ, ಚುನಾವಣೆಯಲ್ಲಿ ಖರ್ಗೆ ಅವರ ಕೈಮೇಲಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಕ್ಟೋಬರ್‌ ೧೭ರಂದು ಚುನಾವಣೆ ನಡೆಯಲಿದೆ.

ಇದನ್ನೂ ಓದಿ | Congress President | ಖರ್ಗೆ ಸ್ಪರ್ಧೆ ಹಿಂದಿನ ಲೆಕ್ಕಾಚಾರ ಏನು? ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭ?

Exit mobile version