ನವದೆಹಲಿ: ಪರೀಕ್ಷೆಯ ದೃಷ್ಟಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಜತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೈಗೊಳ್ಳುವ ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha) ಕಾರ್ಯಕ್ರಮಕ್ಕೂ ಮೊದಲು ನರೇಂದ್ರ ಮೋದಿ ಅವರು ಬರೆದಿರುವ ‘ಎಕ್ಸಾಂ ವಾರಿಯರ್ಸ್’ ಪುಸ್ತಕದ (Exam Warriors Book) ಪರಿಷ್ಕೃತ ಅವತರಣಿಕೆಯನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ ಸೇರಿ 13 ಸ್ಥಳೀಯ ಭಾಷೆಗಳಲ್ಲಿ ಪುಸ್ತಕ ಲಭ್ಯವಿದೆ.
ಪರೀಕ್ಷೆಗೆ ಹೇಗೆ ಸಿದ್ಧವಾಗುವುದು, ಒತ್ತಡವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು, ಪೋಷಕರು ಹಾಗೂ ಶಿಕ್ಷಕರು ಕೂಡ ಪರೀಕ್ಷೆ ವೇಳೆ ಹೇಗೆ ವರ್ತಿಸಬೇಕು, ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಪರಿಷ್ಕೃತ ಪುಸ್ತಕದಲ್ಲಿ ಅಡಕವಾಗಿಸಲಾಗಿದೆ. ಅದರಲ್ಲೂ, 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ 34 ಹೊಸ ಸೂತ್ರಗಳು ಅಥವಾ ಮಂತ್ರಗಳನ್ನು ಸೇರಿಸಲಾಗಿದೆ. ಪರಿಷ್ಕೃತ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೋಷಕರು ಹಾಗೂ ಶಿಕ್ಷಕರಿಗೆ ಪತ್ರಗಳನ್ನೂ ಬರೆದಿದ್ದಾರೆ.
ಯಾವ ಭಾಷೆಯಲ್ಲಿ ಪುಸ್ತಕ ಲಭ್ಯ?
ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಅಸ್ಸಾಮೀಸ್, ಗುಜರಾತಿ, ಮರಾಠಿ, ಪಂಜಾಬಿ, ಉರ್ದು ಹಾಗೂ ಬೆಂಗಾಲಿ ಭಾಷೆಯಲ್ಲಿ ಪುಸ್ತಕ ಲಭ್ಯವಿದೆ.
ಜನವರಿ 27ರಂದು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ನಡೆಯಲಿದ್ದು, ದೇಶಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಳ್ಳಲಿದ್ದಾರೆ. ಇವರೆಲ್ಲರನ್ನು ಉದ್ದೇಶಿಸಿ ಮೋದಿ ಅವರು ವರ್ಚ್ಯುವಲ್ ಆಗಿ ಮಾತನಾಡಲಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೂ ಪರಿಹಾರ ಸೂಚಿಸಲಿದ್ದಾರೆ.
ಇದನ್ನೂ ಓದಿ | SSLC Exam 2023 | ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ; ಗಣಿತ, ಸಮಾಜ ಶಾಸ್ತ್ರ ಪರೀಕ್ಷಾ ದಿನ ಬದಲು