Site icon Vistara News

ಗಾಯದ ಮೇಲೆ ಬರೆ; ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಲು ಆರ್‌ಎಲ್‌ಡಿ ಸಜ್ಜು!

Rahul Gandhi

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವ ಮುನ್ನವೇ ಇಂಡಿಯಾ ಒಕ್ಕೂಟದಿಂದ (India Bloc) ಒಂದೊಂದೇ ಪಕ್ಷಗಳು ಹೊರಬರುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಪ್‌ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನ ತೆಗೆದುಕೊಂಡಿವೆ. ನಿತೀಶ್‌ ಕುಮಾರ್‌ (Nitish Kumar) ಅವರು ಈಗಾಗಲೇ ಬಿಜೆಪಿ ಮೈತ್ರಿ ಸೇರಿದ್ದಾರೆ. ಇದರ ಬೆನ್ನಲ್ಲೇ, ಇಂಡಿಯಾ ಒಕ್ಕೂಟದಿಂದ ಹೊರಬರಲು ರಾಷ್ಟ್ರೀಯ ಲೋಕದಳವೂ (RLD) ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಜಯಂತ್‌ ಚೌಧರಿ ನೇತೃತ್ವದ ಆರ್‌ಎಲ್‌ಡಿಯು ಐದು ಲೋಕಸಭೆ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಆದರೆ, ಬಿಜೆಪಿಯು ಮೂರು ಕ್ಷೇತ್ರ ಬಿಟ್ಟುಕೊಡುವುದಾಗಿ ತಿಳಿಸಿದೆ. ಮುಜಫ್ಫರ್‌ನಗರ ಕ್ಷೇತ್ರದ ಕುರಿತು ಹೆಚ್ಚಿನ ಮಾತುಕತೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಫೆಬ್ರವರಿ 12ರಂದು ಆರ್‌ಎಲ್‌ಡಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರುವ ಕುರಿತು ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಆರ್‌ಎಲ್‌ಡಿ ಮಧ್ಯೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆದಿತ್ತು. ಮೂಲಗಳ ಪ್ರಕಾರ, ಆರ್‌ಎಲ್‌ಡಿಗೆ ಲೋಕಸಭೆಯ ಏಳು ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಕೊಂಡಿತ್ತು ಎನ್ನಲಾಗಿದೆ. ಆದರೆ, ಈಗ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟ ತೊರೆಯಲು ಸಜ್ಜಾಗಿದ್ದು, ಶೀಘ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ಪ್ರವೇಶಿಸುವ ಮುನ್ನವೇ ಆರ್‌ಎಲ್‌ಡಿಯು ಇಂಡಿಯಾ ಒಕ್ಕೂಟಕ್ಕೆ ವಿದಾಯ ಹೇಳಲು ಮುಂದಾಗಿರುವುದು ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಫೆಬ್ರವರಿ 14ರಂದು ಭಾರತ್‌ ಜೋಡೋ ನ್ಯಾಯ ಯಾತ್ರೆಯು ಉತ್ತರ ಪ್ರದೇಶ ಪ್ರವೇಶಿಸಲಿದೆ.

ಇದನ್ನೂ ಓದಿ: Nitish Kumar: ನಿತೀಶ್‌ ವಿದಾಯದಿಂದ ಇಂಡಿಯಾ ಒಕ್ಕೂಟದ ಮೇಲಾಗುವ ಪರಿಣಾಮಗಳೇನು?

ಇಂಡಿಯಾ ಒಕ್ಕೂಟಕ್ಕೆ ಸಾಲು ಸಾಲು ಪೆಟ್ಟು

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾಗಿದೆ. ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ. ಈಗ ಮತ್ತೊಂದು ಪಕ್ಷವು ಒಕ್ಕೂಟ ತೊರೆಯಲು ಸಿದ್ಧತೆ ನಡೆಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version