Site icon Vistara News

Rain fury: ಮಹಾಮಳೆಗೆ ತತ್ತರಿಸಿದ ಅಹಮದಾಬಾದ್:‌ ಒಂದೇ ದಿನ 115 ಮಿ.ಮೀ ಮಳೆ, 5 ವರ್ಷದಲ್ಲೇ ಇದು ದಾಖಲೆ

ahamadabad rain

ಅಹಮದಾಬಾದ್: ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಅಸ್ಸಾಂ ರಾಜ್ಯಗಳನ್ನು ಕಂಗೆಡಿಸಿರುವ ಮಹಾಮಳೆ ಇದೀಗ ಗುಜರಾತ್‌ನಲ್ಲೂ ಅಟ್ಟಹಾಸವನ್ನೇ ಮೆರೆಯುತ್ತಿದೆ. ಅದರಲ್ಲೂ ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಂತೂ ಕಳೆದ ಕಳೆದ ಮೂರ್ನಾಲ್ಕು ದಿನಗಳಿಂದ ವರುಣಾರ್ಭಟ ಜೋರಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಹಮದಾಬಾದ್​ನಲ್ಲಿ ಭಾನುವಾರ ಸಂಜೆಯಿಂದ ರಾತ್ರಿವರೆಗೆ ಸುಮಾರು ಮೂರು ಗಂಟೆಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದಾಗಿ ಇಡೀ ನಗರವೇ ರಾಡಿ ಎದ್ದು ಹೋಗಿದೆ. ಇಲ್ಲಿ ೧೧೫ ಮಿಮೀನಷ್ಟು ಮಳೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿ ಜುಲೈ ತಿಂಗಳಲ್ಲಿ ಇಷ್ಟೊಂದು ಮಳೆ ಸುರಿದಿದ್ದೂ ಒಂದು ದಾಖಲೆಯೇ.

ಬಾಯ್ತೆರೆದ ರಸ್ತೆಯೊಳಗೆ ಕಾರು!

ಭಾನುವಾರ ಸಂಜೆ 7 ಗಂಟೆಗೆ ಶುರುವಾದ ಮಳೆ ರಾತ್ರಿ 10ರವರೆಗೂ ಎಡೆಬಿಡದೆ ಸುರಿದಿದೆ. ಪರಿಣಾಮ ಜುಲೈ 2017 ರಲ್ಲಿ 114.7 ಮಿ.ಮೀ ಮಳೆಯಾಗಿ ದಾಖಲೆ ಮಾಡಿತ್ತು. ಈಗ ಆ ದಾಖಲೆಯನ್ನು ಮುರಿದು ನಿನ್ನೆ ಒಂದೇ ದಿನದಲ್ಲೇ 115 ಮಿಲಿ ಮೀಟರ್ ಮಳೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ನಗರದ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಮಳೆಯ ಹೊಡೆತಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಅಹಮದಾಬಾದ್‌ನ ರಸ್ತೆಗಳು ಮಳೆಗೆ ಕುಸಿದು ಹೋಗಿವೆ, ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಒಮ್ಮಿಂದೊಮ್ಮೆಗೇ ಗುಂಡಿಗಳು ಸೃಷ್ಟಿಯಾಗಿ ವಾಹನಗಳು ಅದರಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ವೈರಲ್‌ ಆಗಿವೆ.

ಇದನ್ನು ಓದಿ| ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವರುಣಾರ್ಭಟ, ಜುಲೈ 15ರವರೆಗೆ ಭಾರಿ ಮಳೆ ಸಾಧ್ಯತೆ

ಜಿಲ್ಲೆಯ ಪಲ್ಡಿ (239 ಮಿ.ಮೀ) ಬೋಡಕ್​ದೇವ್ (198 ಮಿ.ಮೀ), ಉಸ್ಮಾನ್​ಪುರ (196 ಮಿ.ಮೀ) ಮಕ್ತಾಮಂಪುರ (182 ಮಿ.ಮೀ) ಜೋಧ್​ಪುರ (180 ಮಿ.ಮೀ) ಮಿಲಿ ಮೀಟರ್​ ಮಳೆಯಾಗಿದೆ. ಒಟ್ಟಾರೆ ಅಹಮದಾಬಾದ್​ನಲ್ಲಿ ಭಾನುವಾರ ಸಂಜೆ 782 ಮಿಲಿ ಮೀಟರ್​ ಮಳೆಯಾಗುವ ಮೂಲಕ ಮುಂಗಾರಿನ ಅರ್ಧ ಭಾಗದಷ್ಟು ಮಳೆ ಒಂದೇ ದಿನದಲ್ಲಿ ಸುರಿದು ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ.

ನೆರವಿನ ಭರವಸೆ ನೀಡಿದ ಪ್ರಧಾನಿ ಮೋದಿ

ಮಳೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್​​ನ ಸಿಎಂ ಭೂಪೇಂದ್ರ ರಜನಿಕಾಂತ್ ಪಟೇಲ್​ಗೆ ಸೂಚಿಸಿದ್ದಾರೆ. ಪ್ರವಾಹ ಪೀಡಿತ ಸ್ಥಳಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ, ಹಾಗೂ ನಿರಾಶ್ರಿತ ಕೇಂದ್ರಗಳಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರಿಗೆ ಊಟದ ವ್ಯವಸ್ಥೆ, ಆಶ್ರಯದ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರದಿಂದ ಪ್ರವಾಹ ಪೀಡಿತ ಜನರಿಗೆ ಅಗತ್ಯ ಸವಲತ್ತು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಳೆಯಿಂದ ಬಾಯಿ ಬಿಟ್ಟಿರುವ ರಸ್ತೆ

ಗುಜರಾತ್​ನ ಮಹಾಮಳೆಗೆ ಈವರೆಗೂ 61 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಗ್ರಾಮಗಳಲ್ಲಿ ಭೀಕರ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇನ್ನು ಕೂಡ ನಡುಗಡ್ಡೆಯಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್​ ಮೂಲಕ ರಕ್ಷಣೆ ಮಾಡುವ ಕಾರ್ಯ ಸಾಗುತ್ತಿದೆ. ಈಗಾಗಲೇ 2000 ಕ್ಕೂ ಹೆಚ್ಚು ಮಂದಿಯನ್ನು ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿದೆ. ಇನ್ನು ಮೂರ್ನಾಲ್ಕು ದಿನ ಮಳೆ ಹೀಗೆ ಮುಂದುವರಿಯಲಿದ್ದು, ಮುಂಜಾಗೃತಾ ಕ್ರಮಗಳನ್ನು ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನು ಓದಿ| Weather Report: ಕರಾವಳಿಯಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆ; ರೆಡ್‌ ಅಲರ್ಟ್‌ ಘೋಷಣೆ

Exit mobile version