ಮುಂಬೈ: ಮಹಾರಾಷ್ಟ್ರದ ಅಹ್ಮದ್‌ನಗರಕ್ಕೆ ಅಹಲ್ಯಾನಗರ ಎಂಬುದಾಗಿ ಮರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ಮರಾಠ ಸಂಸ್ಥಾನದ ಮಾಲ್ವಾ ಪ್ರಾಂತ್ಯದ ರಾಣಿಯಾಗಿದ್ದ ಅಹಲ್ಯಾಬಾಯಿ (ಅಹಲ್ಯಾದೇವಿ ಎಂದೂ ಕರೆಯಲಾಗುತ್ತದೆ) ಹೋಳ್ಕರ್ ಅವರಿಗೆ ಗೌರವ ಸಲ್ಲಿಸಲು ಅಹ್ಮದ್ ನಗರಕ್ಕೆ ಅಹಲ್ಯಾನಗರ ಎಂಬ ಹೆಸರಿಡಲು ತೀರ್ಮಾನಿಸಲಾಗಿದೆ.
ದೇವಾಲಯ ಹಾಗೂ ಧರ್ಮಶಾಲೆಗಳನ್ನು ನಿರ್ಮಿಸಿದ ಖ್ಯಾತಿ ಹೊಂದಿರುವ ಅಹಲ್ಯಾಬಾಯಿ ಹೋಳ್ಕರ್ ಅವರ ಜಯಂತಿ ಆಚರಿಸಿದ ಬಳಿಕ ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಅಹ್ಮದ್‌ನಗರವನ್ನು ಅಹಲ್ಯಾನಗರ ಎಂಬುದಾಗಿ ಮರು ನಾಮಕರಣ ಮಾಡಬೇಕು ಎಂಬುದಾಗಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪ್ರಸ್ತಾಪಿಸಿದ ಕೆಲವೇ ಗಂಟೆಯಲ್ಲಿ ಏಕನಾಥ್ ಶಿಂಧೆ ಘೋಷಣೆ ಮಾಡಿದ್ದಾರೆ. ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಫಡ್ನವಿಸ್, ಶಿಂಧೆ ಸೇರಿ ಹಲವು ಸಚಿವರು ಕೂಡ ಭಾಗವಹಿಸಿದ್ದರು.
Maharashtra CM Eknath Shinde announces that the State government has decided to name Ahmednagar district after Ahilya Devi Holkar. pic.twitter.com/LwbaIfVl4m
— ANI (@ANI) May 31, 2023
“ಸಾರ್ವಜನಿಕರ ಬೇಡಿಕೆಯ ಮೇರೆಗೆ ಅಹ್ಮದ್‌ನಗರವನ್ನು ಅಹಲ್ಯಾನಗರ ಎಂಬುದಾಗಿ ಮರು ನಾಮಕರಣ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ. ನಾನು ಹಾಗೂ ದೇವೇಂದ್ರ ಫಢ್ನವಿಸ್ ಅವರು ಇಂತಹ ತೀರ್ಮಾನದ ಭಾಗವಾಗಿದ್ದೇವೆ ಎಂಬುದಕ್ಕೆ ಹೆಮ್ಮೆ ಇದೆ” ಎಂದು ಚೋಂಡಿಯಲ್ಲಿ ನಡೆದ ಸಮಾವೇಶದಲ್ಲಿ ಏಕನಾಥ್ ಶಿಂಧೆ ತಿಳಿಸಿದರು. ಅಹಲ್ಯಾಬಾಯಿ ಹೋಳ್ಕರ್ ಅವರ 298ನೇ ಜಯಂತಿಯೇ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ.
ಪ್ರಸಕ್ತ ವರ್ಷದಲ್ಲಿ ಮೂರನೇ ನಗರದ ಹೆಸರು ಬದಲು
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಲವು ನಗರಗಳ ಹೆಸರುಗಳನ್ನು ಬದಲಿಸಿದೆ. ಅದರಲ್ಲೂ, ಪ್ರಸಕ್ತ ವರ್ಷದಲ್ಲಿಯೇ ಮೂರನೇ ನಗರದ ಹೆಸರು ಬದಲಿಸಲು ತೀರ್ಮಾನಿಸಿದೆ. ಕಳೆದ ಫೆಬ್ರವರಿಯಲ್ಲಿ ಔರಂಗಾಬಾದ್‌ಅನ್ನು ಛತ್ರಪತಿ ಸಂಭಾಜಿನಗರ್ ಎಂಬುದಾಗಿ, ಉಸ್ಮಾನಾಬಾದ್ ನಗರವನ್ನು ಧಾರಾಶಿವ್ ಎಂಬುದಾಗಿ ಬದಲಿಸುವ ಪ್ರಸ್ತಾಪಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಈಗ ಮತ್ತೊಂದು ನಗರದ ಹೆಸರು ಬದಲಿಸಿದೆ.
ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ