ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ನಾಯಕತ್ವ ವಿಚಾರಕ್ಕೆ (AIADMK Power Tussle)ಸಂಬಂಧಪಟ್ಟಂತೆ ಒ. ಪನ್ನೀರಸೆಲ್ವಂ ಮತ್ತು ಕೆ.ಪಳನಿಸ್ವಾಮಿ ನಡುವೆ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಈಗ ಒ.ಪನ್ನೀರಸೆಲ್ವಂಗೆ ಹಿನ್ನಡೆಯಾಗಿದೆ. ಆಗಸ್ಟ್ 17ರಂದು ಮದ್ರಾಸ್ ಹೈಕೋರ್ಟ್, ಒ ಪನ್ನೀರಸೆಲ್ವಮ್ ಪರ ತೀರ್ಪು ನೀಡಿತ್ತು. ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಪ್ರಧಾನಕಾರ್ಯದರ್ಶಿಯನ್ನಾಗಿ ಕೆ.ಪಳನಿಸ್ವಾಮಿ ಆಯ್ಕೆ ಮಾಡಿದ್ದನ್ನು ಅಮಾನ್ಯಗೊಳಿಸಿ, ಹೈಕೋರ್ಟ್ನ ನ್ಯಾ. ಜಯಚಂದ್ರನ್ ತೀರ್ಪು ನೀಡಿದ್ದರು. ಇದರಿಂದ ತೀವ್ರ ಹಿನ್ನಡೆ ಅನುಭವಿಸಿದ ಪಳನಿಸ್ವಾಮಿ, ಆದೇಶ ಮರುಪರಿಶೀಲಿಸುವಂತೆ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ನ ಎಂ.ದೊರೆಸ್ವಾಮಿ ಮತ್ತು ನ್ಯಾ.ಸುಂದರ್ ಮೋಹನ್ ಅವರನ್ನೊಳಗೊಂಡ ಪೀಠ, ಅಂದು ನ್ಯಾ. ಜಯಚಂದ್ರನ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲಿಗೆ ಇ.ಕೆ.ಪಳನಿಸ್ವಾಮಿಯವರೇ ಎಐಎಡಿಎಂಕೆ ಬಾಸ್ ಆಗಿದ್ದಾರೆ.
ಜಯಲಲಿತಾ ಮೃತಪಟ್ಟ ಮೇಲೆ ಅವರ ಆಪ್ತೆ ಶಶಿಕಲಾ ಪಕ್ಷದ ಮೇಲೆ ಸಂಪೂರ್ಣ ಅಧಿಪತ್ಯ ಸ್ಥಾಪಿಸಲು ಮುಂದಾದ ಹೊತ್ತಲ್ಲಿ, ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಒಟ್ಟಾಗಿದ್ದರು. ಪಕ್ಷದಲ್ಲಿ ದ್ವಿನಾಯಕತ್ವ ಅಸ್ತಿತ್ವಕ್ಕೆ ಬಂದಿತ್ತು. ಆದರೆ 2021ರ ತಮಿಳುನಾಡಿನ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೋಲಾಗಿ, ಜನರು ಡಿಎಂಕೆಯನ್ನು ಅಧಿಕಾರಕ್ಕೆ ಏರಿಸಿದ ಬೆನ್ನಲ್ಲೇ, ಪಕ್ಷದಲ್ಲಿ ದ್ವಿನಾಯಕತ್ವದ ಬಗ್ಗೆ ಅಸಮಾಧಾನ ಶುರುವಾಯಿತು. ಇಬ್ಬರು ನಾಯಕರಿದ್ದರೆ ಎಲ್ಲ ವಿಷಯದಲ್ಲೂ ಗೊಂದಲ ಉಂಟಾಗುತ್ತದೆ. ಒಂದು ಪಕ್ಷ, ಒಬ್ಬ ನಾಯಕ ನಿಯಮ ಇರಬೇಕು ಪಕ್ಷದ ಅನೇಕರು ದುಂಬಾಲುಬಿದ್ದರು. ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ಪಳನಿಸ್ವಾಮಿ ಬೆಂಬಲಿಗರ ಸಂಖ್ಯೆ ಪಕ್ಷದಲ್ಲಿ ಜಾಸ್ತಿ ಇದ್ದಿದ್ದರಿಂದ ಅವರೇ ನಾಯಕರಾಗಲಿ ಎಂಬ ಮಾತೇ ಕೇಳಿಬಂತು. ಇದು ಒಪಿಎಸ್-ಇಪಿಎಸ್ ಕಾಳಗಕ್ಕೆ ಕಾರಣವಾಗಿದೆ.
ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ನಾಯಕತ್ವ ಯಾರಿಗೆ? ಎಂಬುದನ್ನು ಚರ್ಚಿಸಲು ಇದೇ ವರ್ಷ ಜೂನ್ ತಿಂಗಳಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಅಲ್ಲಿ ಏನೂ ತೀರ್ಮಾನ ಆಗಿರಲಿಲ್ಲ. ಜುಲೈ 11ಕ್ಕೆ ಮತ್ತೆ ಎಐಎಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆ ನಡೆಸಿದ್ದರು. ಅದರಲ್ಲಿ ಪಳನಿಸ್ವಾಮಿ ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡು, ಪನ್ನೀರಸೆಲ್ವಂರನ್ನು ಉಚ್ಚಾಟನೆ ಮಾಡಲಾಗಿತ್ತು. ತನ್ನನ್ನು ಉಚ್ಚಾಟನೆ ಮಾಡಿದ್ದನ್ನು ಪ್ರಶ್ನಿಸಿ ಪನ್ನೀರಸೆಲ್ವಂ ಮದ್ರಾಸ್ ಹೈಕೋರ್ಟ್ಗೆ ಹೋಗಿದ್ದರು. ಮೊದಲ ಸಲ ಏಕಸದಸ್ಯ ಪೀಠದಲ್ಲಿ ಅವರಿಗೆ ಗೆಲುವಾದಂತೆ ಕಂಡರೂ, ಇದೀಗ ದ್ವಿಸದಸ್ಯ ಪೀಠದ ತೀರ್ಪಿನಿಂದ ಮತ್ತೆ ಹಿನ್ನಡೆಯಾಗಿದೆ.
ಇದನ್ನೂ ಓದಿ:ವಿಸ್ತಾರ Explainer: ಎಐಎಡಿಎಂಕೆ ಬಿರುಕು, ಅಣ್ಣಾ ದ್ರಾವಿಡ ಕಳಗಂನಲ್ಲಿ ಅಣ್ಣಂದಿರ ಕಾಳಗವೇಕೆ?