ಚೆನ್ನೈ: ತಮಿಳುನಾಡಿನ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ನಾಯಕರಾದ ಒ.ಪನ್ನೀರಸೆಲ್ವಂ (ಒಪಿಎಸ್) ಮತ್ತು ಇ.ಪಳನಿಸ್ವಾಮಿ (ಇಪಿಎಸ್) ನಡುವಿನ ಕಾಳಗದಲ್ಲಿ ಈಗ ಪಳನಿಸ್ವಾಮಿಗೆ ತೀವ್ರ ಹಿನ್ನಡೆಯಾಗಿದೆ. ಜುಲೈ 11ರಂದು ನಡೆದಿದ್ದ ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪಳನಿಸ್ವಾಮಿಗೆ ಈಗ ಮದ್ರಾಸ್ ಹೈಕೋರ್ಟ್ ನಿರಾಸೆ ಮೂಡಿಸಿದೆ. ಪಳನಿಸ್ವಾಮಿ ಆಯ್ಕೆ ಮಾನ್ಯ ಅಲ್ಲವೇ ಅಲ್ಲ ಎಂದು ಹೈಕೋರ್ಟ್ನ ನ್ಯಾ. ಜಯಚಂದ್ರನ್ ನೇತೃತ್ವದ ಪೀಟ ತೀರ್ಪು ನೀಡಿದೆ.
ಜಯಲಲಿತಾ ಮೃತಪಟ್ಟ ಮೇಲೆ ಅವರ ಆಪ್ತೆ ಶಶಿಕಲಾ ಪಕ್ಷದ ಮೇಲೆ ಸಂಪೂರ್ಣ ಅಧಿಪತ್ಯ ಸ್ಥಾಪಿಸಲು ಮುಂದಾದ ಹೊತ್ತಲ್ಲಿ, ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಒಟ್ಟಾಗಿದ್ದರು. ಪಕ್ಷದಲ್ಲಿ ದ್ವಿನಾಯಕತ್ವ ಅಸ್ತಿತ್ವಕ್ಕೆ ಬಂದಿತ್ತು. ಆದರೆ 2021ರ ತಮಿಳುನಾಡಿನ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೋಲಾಗಿ, ಜನರು ಡಿಎಂಕೆಯನ್ನು ಅಧಿಕಾರಕ್ಕೆ ಏರಿಸಿದ ಬೆನ್ನಲ್ಲೇ, ಪಕ್ಷದಲ್ಲಿ ದ್ವಿನಾಯಕತ್ವದ ಬಗ್ಗೆ ಅಸಮಾಧಾನ ಶುರುವಾಯಿತು. ಇಬ್ಬರು ನಾಯಕರಿದ್ದರೆ ಎಲ್ಲ ವಿಷಯದಲ್ಲೂ ಗೊಂದಲ ಉಂಟಾಗುತ್ತದೆ. ಒಂದು ಪಕ್ಷ, ಒಬ್ಬ ನಾಯಕ ನಿಯಮ ಇರಬೇಕು ಪಕ್ಷದ ಅನೇಕರು ದುಂಬಾಲುಬಿದ್ದರು. ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ಪಳನಿಸ್ವಾಮಿ ಬೆಂಬಲಿಗರ ಸಂಖ್ಯೆ ಪಕ್ಷದಲ್ಲಿ ಜಾಸ್ತಿ ಇದ್ದಿದ್ದರಿಂದ ಅವರೇ ನಾಯಕರಾಗಲಿ ಎಂಬ ಮಾತೇ ಕೇಳಿಬಂತು. ಇದು ಒಪಿಎಸ್-ಇಪಿಎಸ್ ಕಾಳಗಕ್ಕೆ ಕಾರಣವಾಯಿತು.
ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಇಬ್ಬರಲ್ಲಿ ನಾಯಕತ್ವ ಯಾರಿಗೆ? ಎಂಬುದನ್ನು ಚರ್ಚಿಸಲು ಇದೇ ವರ್ಷ ಜೂನ್ ತಿಂಗಳಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಅಲ್ಲಿ ಏನೂ ತೀರ್ಮಾನ ಆಗಿರಲಿಲ್ಲ. ಜುಲೈ 11ಕ್ಕೆ ಮತ್ತೆ ಎಐಎಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆ ಆಯೋಜಿಸಲಾಗಿತ್ತು. ತನಗೆ ಸೋಲು ಪಕ್ಕಾ ಎಂದರತಿದ್ದ ಪನ್ನೀರಸೆಲ್ವೆಂ, ಸಭೆ ನಡೆಯಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿ, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಆಗ ಕೋರ್ಟ್ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಸಭೆ ನಡೆದಿತ್ತು ಮತ್ತು ಜಾಸ್ತಿ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದ ಪಳನಿಸ್ವಾಮಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅದೇ ಸಭೆಯಲ್ಲಿ ಪನ್ನೀರಸೆಲ್ವಂರನ್ನು ಪಕ್ಷದಿಂದಲೇ ಉಚ್ಚಾಟನೆಯನ್ನೂ ಮಾಡಲಾಗಿತ್ತು. ಇನ್ನು ನಾಲ್ಕು ತಿಂಗಳಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಸಬೇಕು, ಅಲ್ಲಿಯವರೆಗೆ ಪಳನಿಸ್ವಾಮಿ ಹಂಗಾಮಿ ಆಗಿ ಮುಂದುವರಿಯುತ್ತಾರೆ ಎಂಬ ನಿರ್ಣಯವನ್ನು ಅಂದಿನ ಸಭೆಯಲ್ಲಿ ಕೈಗೊಳ್ಳಲಾಗಿತ್ತು.
ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಪನ್ನೀರಸೆಲ್ವಂ
ಇಷ್ಟೆಲ್ಲ ಆದ ಮೇಲೆ ಪನ್ನೀರಸೆಲ್ವಂ ತಮ್ಮ ಕಾನೂನು ಹೋರಾಟ ನಿಲ್ಲಿಸಿರಲಿಲ್ಲ. ಜುಲೈ 11ರಂದು ನಡೆದ ಎಐಎಡಿಎಂಕೆ ಸಾಮಾನ್ಯ ಮಂಡಳಿ ಸಭೆಯಲ್ಲಿ ತಮ್ಮನ್ನು ಉಚ್ಚಾಟನೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ‘ನಾನು ಪಕ್ಷ ಸಂಯೋಜಕ, ಖಜಾಂಚಿ ಮತ್ತು ನಾನಲ್ಲಿ ಒಬ್ಬ ಪ್ರಾಥಮಿಕ ಸದಸ್ಯ. ಅಷ್ಟು ಸುಲಭವಾಗಿ ನನ್ನನ್ನು ಹೇಗೆ ಉಚ್ಚಾಟನೆ ಮಾಡುತ್ತಾರೆ’ ಎಂದು ಪ್ರಶ್ನಿಸಿದ್ದರು. ಮೊದಲು ಪನ್ನೀರಸೆಲ್ವಂ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡಲು ಒಪ್ಪದ ಸುಪ್ರೀಂಕೋರ್ಟ್, ನಂತರ ಅದನ್ನು ಜುಲೈ 29ರಂದು ಮತ್ತೆ ಮದ್ರಸ್ ಹೈಕೋರ್ಟ್ಗೆ ವರ್ಗಾಯಿಸಿ, ಇನ್ನು ಮೂರು ವಾರದ ಒಳಗೆ ಈ ಕೇಸ್ ತೀರ್ಪು ನೀಡುವಂತೆ ಸೂಚನೆ ನೀಡಿತ್ತು.
ಇದನ್ನೂ ಓದಿ: ಎಐಎಡಿಎಂಕೆ ದ್ವಿನಾಯಕತ್ವ ವಿವಾದ; ಪಳನಿಸ್ವಾಮಿ ಪ್ರಧಾನ ಕಾರ್ಯದರ್ಶಿ, ಬೆಂಬಲಿಗರಿಂದ ಬೀದಿ ಗಲಾಟೆ