ಚೆನ್ನೈ, ತಮಿಳುನಾಡು: ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಭಾರತೀಯ ಜನತಾ ಪಾರ್ಟಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಸೋಮವಾರ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ(AIADMK Quits NDA). ಅಲ್ಲದೇ, ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದೆ. ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈಯ (Tamil Nadu BJP President K Annamalai) ಅವರ ನಿರಂತರವಾಗಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ, ಎಂಜಿಆರ್ ಹಾಗೂ ಅಣ್ಣಾದೊರೈ ಜತೆಗೆ ಸಮಾಜ ಸುಧಾರಕ ಪೆರಿಯಾರ್ ವಿರುದ್ಧ ಅವಮಾನಕರ ಹೇಳಿಕೆಗಳನ್ನು ನೀಡುತ್ತಿದ್ದರು. ಇದೇ ಕಾರಣಕ್ಕಾಗಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಎನ್‌ಡಿಎದಿಂದ ಹೊರ ಬಂದಿರುವುದಾಗಿ ಪಕ್ಷವು ಹೇಳಿದೆ.
ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಎಐಎಡಿಎಂಕೆ ಸೋಮವಾರ ಸಭೆ ನಡೆಸಿತು. ಈ ಸಭೆಯಲ್ಲಿ ಅವವಿರೋಧವಾಗಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದ ಬಿಜೆಪಿ ನಾಯಕತ್ವವು ಪಕ್ಷದ ಪ್ರಧಾನ ಕಾರ್ಯದರ್ಶಿ ಇಪಿಎಸ್, ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಮಾಜಿ ಮುಖ್ಯಮಂತ್ರಿಗಳ ಅನಗತ್ಯವಾಗಿ ಟೀಕೆ ಮಾಡುತ್ತಾ ಬರುತ್ತಿದೆ. ಇದರಿಂದ ಬೇಸತ್ತು ಮೈತ್ರಿ ಮುರಿದುಕೊಳ್ಳುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಐಎಡಿಎಂಕೆ ಡೆಪ್ಯುಟಿ ಕೋಆರ್ಡಿನೇಟರ್ ಕೆ ಪಿ ಮುನುಸಾಮಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎನ್‍ಡಿಎದಿಂದ ಹೊರ ಬಂದಿರುವ ಎಐಎಡಿಎಂಕೆ ಪ್ರತಿಪಕ್ಷಗಳು ಕೂಟವಾದ ಇಂಡಿಯಾ ಅಲೈನ್ಸ್ ಭಾಗ ಕೂಡ ಆಗಿಲ್ಲ. ಹಾಗಾಗಿ, ಮುಂಬರುವ ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಘೋಷಿಸಿದೆ. ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಹದಗೆಟ್ಟ ಸಂಬಂಧಗಳ ಬಗ್ಗೆ ತಿಂಗಳುಗಳ ಊಹಾಪೋಹಗಳ ನಂತರ ಪಕ್ಷವು ಈ ಪ್ರಮುಖ ನಿರ್ಧಾರಕ್ಕೆ ಬಂದಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಎಐಎಡಿಎಂಕೆ ನಾಯಕರ ವಿರುದ್ಧ ಪದೇ ಪದೇ ಟೀಕೆಗಳ್ನು ಮಾಡಿದ್ದಾರೆ. ಅವರ ಈ ಟೀಕೆಗಳಿಗೆ ಬಿಜೆಪಿಯ ಉನ್ನತ ನಾಯಕತ್ವದ ಬೆಂಬಲ ಇದ್ದಂತೆ ಕಾಣುತ್ತಿತ್ತು.
ಬಿಜೆಪಿ ಅಧ್ಯಕ್ಷನಾಗಲು ಅಣ್ಣಾಮಲೈ ಅಯೋಗ್ಯ ಎಂದ ಎಐಎಡಿಎಂಕೆ ನಾಯಕ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Tamil Nadu BJP President K. Annamalai) ಅವರು ಮಾಡುತ್ತಿರುವ ಟೀಕೆಗಳಿಂದ ಬೇಸತ್ತಿರುವ ಎಐಎಡಿಎಂಕೆಯನ್ನು ಮೈತ್ರಿಯನ್ನು ಮುಂದುವರಿಸದಿರಲು ನಿರ್ಧರಿಸಿದೆ. ಈ ವಿಷಯವನ್ನು ಸ್ವತಃ ಎಐಎಡಿಎಂಕೆಯ ಹಿರಿಯ ನಾಯಕ ಡಿ ಜಯಕುಮಾರ್ ಅವರು ಒಂದು ವಾರದ ಹಿಂದೆ ತಿಳಿಸಿದ್ದರು.
ತಮಿಳುನಾಡಿನ ಹಿರಿಯ ನಾಯಕ ಅಣ್ಣಾದೊರೈ, ಸಮಾಜ ಸುಧಾರಕ ಪೆರಿಯಾರ್ ಮತ್ತು ಎಐಎಡಿಎಂಕೆ ಸಂಸ್ಥಾಪಕ ಎಂಜಿಆರ್ ಅವರ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ನಾವು ಅವರ(ಬಿಜೆಪಿ) ಜತೆ ಹೋಗದಿರಲು ನಿರ್ಧರಿಸಿದ್ದೇವೆ. ಸದ್ಯಕ್ಕಂತೂ ಮೈತ್ರಿ ಖತಂ ಆಗಿದೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಯೋಚಿಸೋಣ ಎಂದು ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಅವರು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: BJP Politics : ನಾಗಲ್ಯಾಂಡ್, ಮೇಘಾಲಯ, ಪುದುಚೇರಿ ರಾಜ್ಯಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ! ಕರ್ನಾಟಕಕ್ಕೆ ಯಾವಾಗ?
ಅಣ್ಣಾಮಲೈ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಲು ಅಯೋಗ್ಯರಾಗಿದ್ದಾರೆ. ಅವರು ತಮ್ಮನ್ನ ತಾವು ಪ್ರೊಜೆಕ್ಟ್ ಮಾಡಿಕೊಳ್ಳಲು ತಮಿಳುನಾಡಿನ ಹಿರಿಯ ನಾಯಕರನ್ನು ಹೀಯಾಳಿಸುತ್ತಿದ್ದಾರೆ ಎಂದು ಎಐಎಡಿಎಂಕೆ ಜಯಕುಮಾರ್ ಅವರು ಹೇಳಿದ್ದರು.
ಈ ಹಿಂದೆ, ಪಕ್ಷದ ಧೀಮಂತ ನಾಯಕಿ ಜಯಲಲಿತಾ ಅವರ ಕುರಿತು ಅಣ್ಣಾಮಲೈ ಅವರು ಟೀಕೆ ಮಾಡಿದ್ದರು. ಎಐಎಡಿಎಂಕೆ ಕುರಿತು ಟೀಕೆಗಳನ್ನು ಮಾಡದಂತೆ ಅಣ್ಣಾಮಲೈ ಅವರನ್ನು ನಿರ್ಬಂಧಿಸಬೇಕು ಎಂದು ಎಐಎಡಿಎಂಕೆ ನಾಯಕರು ಬಿಜೆಪಿಯ ಹಿರಿಯ ನಾಯಕರಿಗೆ ಕೋರಿದ್ದರು. ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಗಳನ್ನು ಹೀಯಾಳಿಸುವುದನ್ನು ಪಕ್ಷದ ಕಾರ್ಯಕರ್ತರು ಇನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.