Site icon Vistara News

Caste Census: 2011ರ ಜಾತಿ ಗಣತಿ ಮಾಹಿತಿ ಬಹಿರಂಗಕ್ಕೆ ರಾಹುಲ್ ಸವಾಲ್; ಮೋದಿಗೆ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ

AICC President Mallikarjun Kharge urges PM Modi to reveal caste census

ನವದೆಹಲಿ: 2011ರ ಜಾತಿಯಾಧರಿತ ಜನಗಣತಿಯನ್ನು (Caste Census) ಬಿಡುಗಡೆ ಮಾಡಲು ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಅವರು ಸವಾಲು ಹಾಕಿದ ದಿನವೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC Presiden Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದು, ಸಮಗ್ರ ಜಾತಿ ಗಣತಿ ಮಾಹಿತಿಯನ್ನು ಸಾರ್ವಜನಿಕಗೊಳಿಸುವಂತೆ ಆಗ್ರಹಿಸಿದ್ದಾರೆ. 2011-12ರಲ್ಲಿ ಯುಪಿಎ ಸರ್ಕಾರವು ಸಮಾಜೋ-ಆರ್ಥಿಕ ಮತ್ತು ಜಾತಿ ಗಣತಿ(SECC)ಯನ್ನು ಕೈಗೊಂಡಿತ್ತು. 2014ರಲ್ಲಿ ನಿಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಸಂಸದರು ಹಾಗೂ ಕಾಂಗ್ರೆಸ್ ವರದಿಯನ್ನು ಪ್ರಕಟಿಸುವಂತೆ ಒತ್ತಾಯಿಸಿದರೂ ತಾವು ಪ್ರಕಟಿಸುತ್ತಿಲ್ಲ ಎಂದು ಖರ್ಗೆ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಅರ್ಥಪೂರ್ಣ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಅಪ್‌ಡೇಟ್‌ ಆಗಿರುವ ಜಾತಿ ಗಣತಿಯ ಮಾಹಿತಿ ಅತ್ಯಗತ್ಯವಾಗಿಬೇಕು. ವಿಶೇಷವಾಗಿ ಒಬಿಸಿಗಳಿಗೆ ವಿಶ್ವಾಸಾರ್ಹ ಡೇಟಾ ಬೇಸ್ ಇಲ್ಲದೇ ಅನ್ಯಾಯವಾಗಿದೆ. ಈ ಜನಗಣತಿಯನ್ನು ಕಾಲ ಕಾಲಕ್ಕೆ ನಡೆಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಖರ್ಗೆ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ನಿಯಮಿತವಾಗಿ ಹತ್ತು ವರ್ಷಕ್ಕೊಮ್ಮೆ ಜನಗಣತಿಯನ್ನು ನಡೆಸಬೇಕು. ಆದರೆ, ಕೇಂದ್ರ ಸರ್ಕಾರವು 2021ರ ಜನಗಣತಿಯನ್ನುಇನ್ನೂ ನಡೆಸಿಲ್ಲ. ಕೂಡಲೇ, ಸಮಗ್ರ ಜಾತಿಗಣಸೇರಿದಂತೆ ಸಮಗ್ರ ಜನಗಣತಿಯನ್ನು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಖರ್ಗೆ ಅವರು ಹೇಳಿದ್ದಾರೆ.

ಭಾನುವಾರ ಕೋಲಾರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದಲ್ಲಿ ಶೇ. 7ರಷ್ಟು ಹಿಂದುಳಿದ ಜಾತಿ, ದಲಿತರು ಮತ್ತು ಬುಡಕಟ್ಟು ಜನಾಂಗದವರು ಕಾರ್ಯದರ್ಶಿಗಳಾಗಿದ್ದಾರೆ. ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: 2011ರ ಜನಗಣತಿ ಆಧಾರದಲ್ಲಿ ವಾರ್ಡ್‌ ಮರು ವಿಂಗಡಣೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

2011ರಲ್ಲಿ ಯುಪಿಎ ಸರ್ಕಾರವು ಜಾತಿಯಾಧರಿತ ಗಣತಿಯನ್ನು ಮಾಡಿತ್ತು. ಅದರಲ್ಲಿ ಎಲ್ಲ ಜಾತಿಗಳ ಮಾಹಿತಿ ಇದೆ. ಪ್ರಧಾನಿಗಳೇ ನೀವು ಒಬಿಸಿಗಳ ಬಗ್ಗೆ ಮಾತನಾಡುತ್ತೀರಿ ಅಲ್ವಾ.. ಹಾಗಿದ್ದರೆ ವರದಿಯನ್ನು ಬಹಿರಂಗಗೊಳಿಸಿ. ದೇಶದಲ್ಲಿ ಎಷ್ಟು ಒಬಿಸಿಗಳಿದ್ದಾರೆ, ದಲಿತರಿದ್ದಾರೆ, ಬುಡಕಟ್ಟು ಜನರಿದ್ದಾರೆಂದು ಎಲ್ಲರಿಗೂ ತಿಳಿಯಲಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.

Exit mobile version