ನವದೆಹಲಿ: 7 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಸೂಜಿಯನ್ನು ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS Delhi) ವೈದ್ಯರು ಈ ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅಯಸ್ಕಾಂತ (Magnet) ಬಳಸಿ ಈ ಸೂಜಿಯನ್ನು ಹೊರ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಲಕನ ಶ್ವಾಸಕೋಶದೊಳಗೆ 4 ಸೆಂ.ಮೀ. ಉದ್ದದ ಸೂಜಿ ಸಿಲುಕಿಕೊಂಡಿತ್ತು. ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗವು ಸಂಕೀರ್ಣ ಎಂಡೋಸ್ಕೋಪಿಕ್ ವಿಧಾನದ ಮೂಲಕ ಈ ಸೂಜಿಯನ್ನು ಹೊರ ತೆಗೆದಿದೆ. ”ಬುಧವಾರ ಬಾಲಕನಿಗೆ ವಿಪರೀತ ಕೆಮ್ಮು ಕಾಣಿಸಿಕೊಂಡಿತ್ತು, ಬಳಿಕ ರಕ್ತ ವಾಂತಿಯಾಯಿತು. ಇದರಿಂದ ಗಾಬರಿಯಾದ ಪಾಲಕರು ಆತನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಕೂಡಲೇ ಕಾರ್ಯ ಪ್ರವೃತ್ತರಾದ ವೈದ್ಯರು ಬಾಲಕನನ್ನು ಎಂಡೋಸ್ಕೋಪಿ ಪರೀಕ್ಷೆಗೆ ಒಳಪಡಿಸಿದರು. ಆಗ ಎಡ ಶ್ವಾಸಕೋಶದ ಭಾಗದಲ್ಲಿ ಸಿಲುಕಿಕೊಂಡಿದ್ದ ಸೂಜಿ ಕಂಡು ಬಂತು” ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ವಿಶೇಷ್ ಜೈನ್ ತಿಳಿಸಿದ್ದಾರೆ.
ಸಂಕೀರ್ಣ ಶಸ್ತ್ರ ಚಿಕಿತ್ಸೆ
ಡಾ.ವಿಶೇಷ್ ಜೈನ್ ಅವರ ಪರಿಚಯಸ್ಥರೊಬ್ಬರು ಅದೇ ದಿನ ಸಂಜೆ ದೆಹಲಿಯ ಚಾಂದನಿ ಚೌಕ್ ಮಾರುಕಟ್ಟೆಯಿಂದ 4 ಎಂಎಂ ಅಗಲ ಮತ್ತು 1.5 ಎಂಎಂ ದಪ್ಪದ ಅಯಸ್ಕಾಂತ ಖರೀದಿಸಿ ಕೊಟ್ಟರು. ʼʼಸೂಜಿ ಶ್ವಾಸಕೋಶದೊಳಗೆ ಎಷ್ಟು ಆಳವಾಗಿ ಸಿಲುಕಿಕೊಂಡಿತ್ತು ಎಂದರೆ ಸಾಂಪ್ರದಾಯಿಕ ವಿಧಾನಗಳು ಬಹುತೇಕ ನಿಷ್ಪರಿಣಾಮಕಾರಿ ಎನ್ನುವುದು ತಿಳಿದುಬಂದ ಕಾರಣ ಅಯಸ್ಕಾಂತದ ಮೊರೆ ಹೋದೆವುʼʼ ಎಂದು ಶಸ್ತ್ರ ಚಿಕಿತ್ಸೆಯ ಸಂಕೀರ್ಣತೆಗಳನ್ನು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ದೇವೇಂದ್ರ ಕುಮಾರ್ ಯಾದವ್ ವಿವರಿಸಿದ್ದಾರೆ. ಬಳಿಕ ಶಸ್ತ್ರಚಿಕಿತ್ಸಾ ತಂಡ ಮತ್ತು ಅದರ ತಾಂತ್ರಿಕ ಅಧಿಕಾರಿ ಸತ್ಯ ಪ್ರಕಾಶ್ ಅವರೊಂದಿಗೆ ಈ ವಿಧಾನದ ಬಗ್ಗೆ ಸಮಾಲೋಚನೆ ನಡೆಸಿ ಒಪ್ಪಿಗೆ ಪಡೆಯಲಾಯಿತು.
ಸಂಪೂರ್ಣ ಚೇತರಿಸಿಕೊಂಡ ಬಾಲಕ
“ಸೂಜಿ ಸಿಲುಕಿಕೊಂಡಿದ್ದ ಸ್ಥಳಕ್ಕೆ ಅಯಸ್ಕಾಂತವನ್ನು ಸುರಕ್ಷಿತವಾಗಿ ತಲುಪಿಸುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತುʼʼ ಎಂದು ಡಾ.ಜೈನ್ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಮುನ್ನ ಅಯಸ್ಕಾಂತವನ್ನು ಕ್ರಿಮಿನಾಶಕ ವಿಧಾನಕ್ಕೆ ಒಳಪಡಿಸಲಾಯಿತು. ನಂತರ ವೈದ್ಯರ ತಂಡ ಅಯಸ್ಕಾಂತವನ್ನು ಬಾಯಿಯ ಮೂಲಕ ಶ್ವಾಸಕೋಶಕ್ಕೆ ತಲುಪಿಸಲಾಯಿತು. ಸೂಜಿಯು ಅಯಸ್ಕಾಂತಕ್ಕೆ ಅಂಟಿಕೊಂಡ ಬಳಿಕ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಸೂಜಿ ಹೊರಬಂದ ತಕ್ಷಣ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸದ್ಯ ಬಾಲಕ ಆರೋಗ್ಯದಿಂದಿದ್ದು, ಸಂಪೂರ್ಣ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನಗಳಿಗೆ ಭದ್ರತೆ ಒದಗಿಸಿ; ಬೆದರಿಕೆ ಬೆನ್ನಲ್ಲೇ ಕೆನಡಾಗೆ ಭಾರತ ಆಗ್ರಹ
ಬಾಲಕ ಸೂಜಿ ನುಂಗಿದ್ದು ಮನೆಯವರಿಗೆ ಗೊತ್ತಿರಲಿಲ್ಲ. ಹೀಗಾಗಿ ಆತ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾದಾಗ ಪಾಲಕರು ಗಾಬರಿಯಾಗಿದ್ದರು. ʼʼಸದ್ಯ ಬಾಲಕನಿಗೆ ಯಾವುದೇ ಸಮಸ್ಯೆ ಇಲ್ಲ. ಆತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆʼʼ ಎಂದು ವೈದ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಏಮ್ಸ್ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಬಾಲಕನ ಜೀವ ಕಾಪಾಡಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ