ನವದೆಹಲಿ: ವಿಶಿಷ್ಟ ಪ್ರಯೋಗ, ಸಂಶೋಧನೆ ಹಾಗೂ ಶಸ್ತ್ರಚಿಕಿತ್ಸೆಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ದೆಹಲಿ ಏಮ್ಸ್ ಸಂಸ್ಥೆಯು ಈಗ ಮತ್ತೊಂದು ವಿಶ್ವದಾಖಲೆ ಬರೆದಿದೆ. ಕೇವಲ ಮೂರು ತಿಂಗಲ ಮಗುವಿಗೆ ಬೈಲ್ಯಾಟರಲ್ ಲ್ಯಾಪೊರೊಸ್ಕೋಪಿಕ್ ಪೆಲೊಪ್ಲಾಸ್ಟಿ (Bilateral Laparoscopic Pyeloplasty) (ಮೂತ್ರನಾಳಕ್ಕೆ ಸಂಬಂಧಿಸಿದ ಜಟಿಲ ಶಸ್ತ್ರಚಿಕಿತ್ಸೆ) ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜಗತ್ತಿನಲ್ಲೇ ಕಡಿಮೆ ವಯಸ್ಸಿನ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ಕೀರ್ತಿಗೆ ಏಮ್ಸ್ ಭಾಜನವಾಗಿದೆ.
ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಕೇವಲ ಮೂರು ತಿಂಗಳ ಮಗುವಿಗೆ ಯಶಸ್ವಿಯಾಗಿ ಕಠಿಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಗುವಿಗೆ ಹುಟ್ಟಿನಿಂದಲೇ ಮೂತ್ರನಾಳದ ಸಮಸ್ಯೆ ಉಂಟಾಗಿತ್ತು. ಮೂತ್ರಪಿಂಡದಿಂದ ಮೂತ್ರಕೋಶಕ್ಕೆ ಮೂತ್ರ ಸರಾಗವಾಗಿ ಹೋಗುತ್ತಿರಲಿಲ್ಲ. ಇದರಿಂದಾಗಿ ಮಗು ಗಂಭೀರ ಸಮಸ್ಯೆ ಎದುರಿಸುತ್ತಿತ್ತು. ಹಾಗಾಗಿ, ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಕೊನೆಗೆ ಏಮ್ಸ್ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಲ್ಯಾಪೊರೊಸ್ಕೋಪಿಕ್ ಪೆಲೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ಕೈಗೊಂಡು ದಾಖಲೆ ನಿರ್ಮಿಸಿದ್ದಾರೆ.
ಮಗುವಿನ ಎರಡೂ ಕಿಡ್ನಿಗಳಿಗೂ ಸಮಸ್ಯೆ ಉಂಟಾಗಿತ್ತು. ಹಾಗಾಗಿ, ವಯಸ್ಸಿನ ಮಿತಿಯ ಅಡಚಣೆ ಇದ್ದರೂ ರಿಸ್ಕ್ ತೆಗೆದುಕೊಳ್ಳಬೇಕಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಇತ್ತು. ಕೊನೆಗೆ, ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಬಾಜಪೇಯಿ ಅವರ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಹಾಗೆಯೇ, ಮೂರೇ ದಿನದಲ್ಲಿ ಮಗುವನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯಲ್ಲೂ ಕಳೆದ ತಿಂಗಳು ವೈದ್ಯರು ಇಂತಹದ್ದೇ ಚಮತ್ಕಾರ ಮಾಡಿದ್ದರು. ಕೇವಲ 14 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಮೂರೂ ಭ್ರೂಣಗಳನ್ನು ಬನಾರಸ್ ಹಿಂದು ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದರು. .
ಇದನ್ನೂ ಓದಿ: Viral News: ಒಂದು ಐಸ್‌ಕ್ರೀಂ ಬೆಲೆ 5 ಲಕ್ಷ ರೂ., ಗಿನ್ನಿಸ್ ದಾಖಲೆ ಬರೆದ ಐಸ್‌ಕ್ರೀಂನಲ್ಲಿ ಅಂಥಾದ್ದೇನಿದೆ?
ಮಗುವನ್ನು ಸ್ಕ್ಯಾನ್ ಮಾಡಿದಾಗ, ಅದರ ಹೊಟ್ಟೆಯಲ್ಲಿ ಮೂರು ಭ್ರೂಣ ಇರುವುದು ಪತ್ತೆಯಾಗಿತ್ತು. ಮಗುವಿನ ಎಕ್ಸ್‌ರೇ ರಿಪೋರ್ಟ್ ನೋಡಿದಾಗ ನಮಗೇ ಅಚ್ಚರಿಯಾಯಿತು. ಮೂರು ಭ್ರೂಣಗಳನ್ನು ಕಂಡು ಗಾಬರಿ ಆಯಿತು. ಕೂಡಲೇ ನಮ್ಮ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮೂರು ಭ್ರೂಣಗಳನ್ನು ಹೊರತೆಗೆದಿದೆ. ಮಗು ಈಗ ಆರೋಗ್ಯದಿಂದ ಇದೆ ವೈದ್ಯರು ತಿಳಿಸಿದ್ದರು.