ನವ ದೆಹಲಿ: ವೈದ್ಯ ಸಂಘಟನೆಗಳ ಭಾರೀ ವಿರೋಧದ ಬಳಿಕ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್), ಹಾಲಿ ಸಂಸದರ ಚಿಕಿತ್ಸೆಗೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್‌ಒಪಿ) ವಾಪಸ್ ಪಡೆದುಕೊಂಡಿದೆ. ಈ ಹಿಂದೆ ಏಮ್ಸ್, ಹಾಲಿ ಸಂಸದರಿಗೆ ವಿಶೇಷ ಚಿಕಿತ್ಸೆ ನೀಡುವುದು ಮತ್ತು ಈ ಕಾರ್ಯ ಸಮನ್ವಯಕ್ಕೆ ನೋಡಲ್ ಆಫೀಸರ್ ನೇಮಕ ಸಂಬಂಧ ಆದೇಶ ನೀಡಿತ್ತು. ಇದು ವಿಐಪಿ ಕಲ್ಚರ್ ಎಂಬ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು ಕೈ ಬಿಟ್ಟಿದೆ (AIIMS UTurn).
ಅಕ್ಟೋಬರ್ 17 ದಿನಾಂಕ ನಮೂದಿಸಲಾಗಿರುವ ಪತ್ರದಲ್ಲಿ ಏಮ್ಸ್‌ನಲ್ಲಿ ಹಾಲಿ ಸಂಸದರಿಗೆ ವಿಶೇಷ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದನ್ನು ಈ ತಕ್ಷಣದಿಂದಲೇ ಜಾರಿಯಾಗುವಂತೆ ಕೈ ಬಿಡಲಾಗಿದೆ ಎಂದು ತಿಳಿಸಲಾಗಿದೆ. ಈ ಪತ್ರ ಕೈ ಸೇರುತ್ತಿದ್ದಂತೆ ಈ ಟ್ವೀಟ್ ಮಾಡಿರುವ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(ಎಫ್ಒಆರ್‌ಡಿಎ) ವಿಶೇಷ ಸೌಲಭ್ಯವನ್ನು ಕೈ ಬಿಡಲಾಗಿದೆ. ಈ ಸಂಬಂಧ ಬೆಂಬಲ ನೀಡಿದವರಿಗೆಲ್ಲ ಇದು ಹೆಮ್ಮೆಯ ಕ್ಷಣ ಎಂದು ಹೇಳಿದೆ.
ಗಿಫ್ಟ್‌ಗಳೊಂದಿಗೆ ನನ್ನ ಕಚೇರಿಗೆ ಬರಬೇಡಿ
ಇತ್ತೀಚೆಗಷ್ಟೇ ಅಖಿಲ ಭಾರತೀಯ ವೈದ್ಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಮುಖ್ಯಸ್ಥರಾಗಿ ನೇಮಕಾಗಿರುವ ಡಾ. ಎಂ ಶ್ರೀನಿವಾಸ್ ಅವರು, ಗಿಫ್ಟ್, ಗ್ರೀಟಿಂಗ್ಸ್‌ನೊಂದಿಗೆ ತಮ್ಮ ಕಚೇರಿಗೆ ಬರಬಾರದು ಎಂದು ತಾಕೀತು ಮಾಡಿದ್ದಾರೆ. ದೀಪಾವಳಿಯ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಮತ್ತು ಸಂಸ್ಥೆಗಳು ಏಮ್ಸ್ ಮುಖ್ಯಸ್ಥರಿಗೆ ಗಿಫ್ಟ್ಸ್ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಖಡಕ್ ನಿರ್ದೇಶನ ನೀಡಿದ್ದು, ಗಿಫ್ಟ್‌ಗಳೊಂದಿಗೆ ಯಾರು ಬರಬಾರದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | AIIMS Delhi | ಕಲ್ಯಾಣ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಡಾ. ಶ್ರೀನಿವಾಸ; ಈಗ ದೆಹಲಿಯ ಏಮ್ಸ್ ನಿರ್ದೇಶಕ