ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ- AIMIM)ನ ಶಾಸಕ ಅಕ್ಬರುದ್ದೀನ್ ಓವೈಸಿ (Akbaruddin Owaisi) ಅವರನ್ನು ತೆಲಂಗಾಣ ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ವಿರೋಧಿಸಿ ತೆಲಂಗಾಣ ಬಿಜೆಪಿ ಇಂದು ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿದೆ.
ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವ ಜವಾಬ್ದಾರಿಯನ್ನು ಹಂಗಾಮಿ ಸ್ಪೀಕರ್‌ಗೆ ವಹಿಸಲಾಗಿದೆ. ಕಳೆದ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಗೋಶಾಮಹಲ್‌ನಿಂದ ಗೆದ್ದಿದ್ದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರು, ಓವೈಸಿ ಇರುವವರೆಗೂ ತಾನು ಪ್ರಮಾಣವಚನ ಸ್ವೀಕರಿಸುವುದಿಲ್ಲ, ಪೂರ್ಣಾವಧಿ ಸ್ಪೀಕರ್ ನೇಮಕವಾದ ಬಳಿಕವಷ್ಟೇ ಪ್ರಮಾಣ ವಚನ ಸ್ವೀಕರಿಸುವುದಾಗಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಈ ಹಿಂದೆ ಹಿಂದೂ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯ (ಅಕ್ಬರುದ್ದೀನ್ ಓವೈಸಿ) ಮುಂದೆ ನಾನು ಪ್ರಮಾಣ ವಚನ ಸ್ವೀಕರಿಸಬಹುದೇ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿತ್ತು. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಜಿ. ಕಿಶನ್ ರೆಡ್ಡಿ ಮಾತನಾಡಿ, ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಸಂಪ್ರದಾಯವಿತ್ತು. ಇದಕ್ಕೆ ವಿರುದ್ಧವಾಗಿ ಓವೈಸಿ ನೇಮಕ ಮಾಡಲಾಗಿದ್ದು, ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಹೇಳಿದರು.
ಈ ಹಂಗಾಮಿ ಸ್ಪೀಕರ್ ಎದುರು ಬಿಜೆಪಿ ಶಾಸಕರು ಪ್ರಮಾಣ ವಚನ ಬಹಿಷ್ಕಾರ ಮಾಡುತ್ತಾರೆ. ಸ್ಪೀಕರ್ ನೇಮಕವಾದ ನಂತರ ನಮ್ಮ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅಂತಹ ಪಕ್ಷದೊಂದಿಗೆ (ಎಐಎಂಐಎಂ) ನಾವು ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಈ ಬಗ್ಗೆ ನಾವು ರಾಜ್ಯಪಾಲರ ಮುಂದೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ರಾಜಾ ಸಿಂಗ್ ಅವರು 2018ರಲ್ಲೂ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದರು. ಆಗ ನೇಮಕಗೊಂಡ ಹಂಗಾಮಿ ಸ್ಪೀಕರ್ ಕೂಡ ಎಐಎಂಐಎಂನವರೇ ಆಗಿದ್ದರು. ಒವೈಸಿ ಅವರು ಶನಿವಾರ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇಂದು ಚುನಾಯಿತ ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.
ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಅವರು ತಮ್ಮ ಹಿಂದಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಂತೆ ಎಐಎಂಐಎಂಗೆ ಹೆದರುತ್ತಾರೆ. ಹೀಗಾಗಿ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.