Site icon Vistara News

Air Force Chopper: ಉತ್ತರಾಖಂಡದಲ್ಲಿ ಕಾಡಿನ ಬೆಂಕಿ ನಂದಿಸಲು ವಾಯು ಪಡೆಯ ಹೆಲಿಕಾಪ್ಟರ್‌ ಬಳಕೆ

Air Force Chopper

Air Force Chopper

ಡೆಹ್ರಾಡೂನ್‌: ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚು (Forest Fires) ಶನಿವಾರ ಪೈನ್‌ ಪ್ರದೇಶದ ಹೈಕೋರ್ಟ್‌ ಕಾಲನಿಯ ಸಮೀಪಕ್ಕೂ ವ್ಯಾಪಿಸಿದ್ದು, ನಂದಿಸಲು ಐಎಎಫ್ (Indian Air Force) ಹೆಲಿಕಾಪ್ಟರ್‌ (Air Force Chopper) ಬಳಸಲಾಗಿದೆ. ಸದ್ಯ ಹೆಲಿಕಾಪ್ಟರ್‌ ಕಾರ್ಯಾಚರಣೆಯ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಗ್ನಿಯ ಕೆನ್ನಾಲಗೆ ಅಪಾಯಕಾರಿಯಾಗಿ ವ್ಯಾಪಿಸುತ್ತಿದ್ದು, ಜನವಸತಿ ಪ್ರದೇಶಗಳತ್ತ ನುಗ್ಗ ತೊಡಗಿದೆ. ಪೈನ್‌ನ ಈ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರಲ್ಲಿ ಸೇನಾ ಕಂಟೋನ್‌ಮೆಂಟ್‌ ಇದ್ದು, ಅಧಿಕಾರಿಗಳ ತ್ವರಿತವಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ʼʼಎಂಐ-17 ವಿ5 (Mi-17 V5) ಹೆಲಿಕಾಪ್ಟರ್‌ ಅನ್ನು ಬೆಂಕಿ ನಿಯಂತ್ರಣ ಕಾರ್ಯಾಚರಣೆಗಾಗಿ ಬಳಸಲಾಗಿದೆʼʼ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಕಾರ್ಯಾಚರಣೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ. “ನೈನಿತಾಲ್ ಬಳಿಯ ವಾಯುಪಡೆ ನಿಲ್ದಾಣದ ಸಮೀಪದ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಿಯಂತ್ರಿಸಲು ಐಎಎಫ್‌ ತನ್ನ ವೈಮಾನಿಕ ಸಾಹಸ ಪ್ರದರ್ಶಿಸಿದೆʼʼ ಎಂದು ಐಎಎಫ್ ಬರೆದುಕೊಂಡಿದೆ.

ಕಾರ್ಯಾಚರಣೆ ಹೇಗಿತ್ತು?

ʼʼಹೆಲಿಕಾಪ್ಟರ್ ನೈನಿ ಮತ್ತು ಭೀಮ್ತಾಲ್ ಸರೋವರಗಳಿಂದ ಬಾಂಬಿ ಬಕೆಟ್‌ (Bambi bucket)ನಲ್ಲಿ ನೀರನ್ನು ಸಂಗ್ರಹಿಸಿ ಪೈನ್ಸ್, ಭೂಮಿಧರ್, ಜ್ಯೋಲಿಕೋಟ್, ನಾರಾಯಣ್ ನಗರ, ಭವಾಲಿ, ರಾಮ್ಗಢ್ ಮತ್ತು ಮುಕ್ತೇಶ್ವರ ಪ್ರದೇಶಗಳಲ್ಲಿ ಕಾಣಿಸಿಕೊಂಡ ಬೆಂಕಿಯ ಮೇಲೆ ಸುರಿದಿದೆʼʼ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಕೆಟ್ ಏಕಕಾಲದಲ್ಲಿ 5,000 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ನೈನಿ ಸರೋವರದಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ ದೋಣಿ ವಿಹಾರದ ಚಟುವಟಿಕೆಗಳನ್ನು ಕೆಲವು ದಿನಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಾರ್ಯಾಚರಣೆಗಾಗಿ ಭೀಮ್ತಾಲ್ ಸರೋವರದಲ್ಲಿ ದೋಣಿ ವಿಹಾರ ನಿಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ʼʼಬೆಂಕಿಯನ್ನು ನಿಯಂತ್ರಣಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆʼʼ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ. ಅವರು ಬೆಂಕಿ ಆವರಿಸಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡಿದ್ದಾರೆ.

ʼʼಕಾಡಿನ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವವರೆಗೆ ಯಾವ ಅರಣ್ಯ ಅಧಿಕಾರಿಗೂ ರಜೆ ನೀಡಬೇಡಿ. ಗಂಭೀರ ಅನಾರೋಗ್ಯದ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿ ನೀಡಬೇಕುʼʼ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ʼʼಕಾಡ್ಗಿಚ್ಚು ನಿಯಂತ್ರಣಕ್ಕೆ ಸೇನೆಯ ಸಹಾಯವನ್ನೂ ಪಡೆಯಲಾಗುತ್ತಿದೆ. ಕಾಡಿಗೆ ಬೆಂಕಿ ಹಚ್ಚಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆʼʼ ಎಂದು ಅವರು ವಿವರಿಸಿದ್ದಾರೆ.

ʼʼಬೆಂಕಿಯನ್ನು ನಿಯಂತ್ರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಡಿಎಫ್ಒಗಳು ಸ್ಥಳದಲ್ಲಿದ್ದಾರೆʼʼ ಎಂದು ರಾಜ್ಯ ಅರಣ್ಯ ಸಚಿವ ಸುಬೋಧ್ ಉನಿಯಾಲ್ ಹೇಳಿದ್ದಾರೆ. ʼʼಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಿಸಲಾಗುವುದುʼʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಕಂಡುಬಂದಿರುವ ನಿರಂತರ ಒಣ ಹವೆಯು ಬೆಂಕಿಯ ಹೆಚ್ಚಳಕ್ಕೆ ಕಾರಣವಾಗಿದೆ.

ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಅವರು ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಪಿಆರ್‌ಡಿ, ವಿಪತ್ತು ನಿರ್ವಹಣೆ, ಜಿಲ್ಲಾ ಪಂಚಾಯತ್ ಮತ್ತು ಪೊಲೀಸರಿಗೆ ಬೆಂಕಿಯನ್ನು ಪರಿಣಾಮಕಾರಿಯಾಗಿ ತಡೆಯಲು ನಿರ್ದೇಶನಗಳನ್ನು ನೀಡಿದ್ದಾರೆ. ಕಸಕ್ಕೆ ಬೆಂಕಿ ಹಚ್ಚದಂತೆ ಜನರಿಗೆ ಅರಿವು ಮೂಡಿಸಲು ಪ್ರತಿ ಗ್ರಾಮದಲ್ಲಿ ತುರ್ತು ಸಭೆಗಳನ್ನು ನಡೆಸಬೇಕೆಂದು ಅವರು ಸೂಚಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಶುಕ್ರವಾರ 31 ಹೊಸ ಕಾಡ್ಗಿಚ್ಚಿನ ಪ್ರಕರಣ ವರದಿಯಾಗಿದ್ದು, 33.34 ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಕಾಡುಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದ ಮೂವರನ್ನು ರುದ್ರಪ್ರಯಾಗದಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಇದನ್ನೂ ಓದಿ: Fire Accident: ಕಾಡ್ಗಿಚ್ಚು ನಂದಿಸಲು ಹೋದ ನಾಲ್ವರು ಸಿಬ್ಬಂದಿಗೆ ತಗುಲಿದ ಬೆಂಕಿ; ಗಾಯಾಳುಗಳು ಆಸ್ಪತ್ರೆಗೆ ದಾಖಲು

Exit mobile version