ನವದೆಹಲಿ: ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನಗಳು (MiG-21 Jets) ಕಾರ್ಯಾಚರಣೆಗಿಂತ ಅಪಘಾತಗಳಿಗೇ ಹೆಚ್ಚು ಹೆಸರುವಾಸಿಯಾಗಿವೆ. ಮೇ 8ರಂದು ರಾಜಸ್ಥಾನದಲ್ಲಿ ಮಿಗ್-21 ಯುದ್ಧವಿಮಾನ ಪತನವಾಗಿ ಮೂವರು ನಾಗರಿಕರು ಮೃತಪಟ್ಟ ಪ್ರಕರಣದ ಕುರಿತು ತನಿಖೆಯಾಗುತ್ತಿರುವ ಬೆನ್ನಲ್ಲೇ, ವಾಯುಪಡೆಯು ಮಿಗ್-21 ಯುದ್ಧವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 2019ರಲ್ಲಿ ಪುಲ್ವಾಮ ದಾಳಿ ಬಳಿಕ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಯುದ್ಧವಿಮಾನದ ವಿಂಗ್ ಕಮಾಂಡರ್ ಆಗಿದ್ದರು. ಹಾಗೆಯೇ, ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದಿದ್ದರು.
ಭಾರತೀಯ ವಾಯುಪಡೆಯಲ್ಲಿರುವ ಮಿಗ್-21 ಯುದ್ಧವಿಮಾನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಪರಿಶೀಲನೆ ಪೂರ್ಣಗೊಳಿಸುವವರೆಗೆ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಅವುಗಳ ಹಾರಾಟವನ್ನು ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸಾಲು ಸಾಲಾಗಿ ವಿಮಾನಗಳ ಪತನವಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇ 8ರಂದು ರಾಜಸ್ಥಾನದ ಹನುಮಾನ್ಗಢ್ನಲ್ಲಿ ಮಿಗ್-21 ವಿಮಾನ ಪತನಗೊಂಡು ಮೂವರು ನಾಗರಿಕರು ಮೃತಪಟ್ಟಿದ್ದರು. ಅದೃಷ್ಟವಶಾತ್ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದರು. ವಿಮಾನ ಸೂರತ್ಗಢ್ನಲ್ಲಿರುವ ವಾಯುನೆಲೆಯಿಂದ ಟೇಕ್ ಆಫ್ ಆಗಿತ್ತು. ಹೀಗೆ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ, ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಬಗ್ಗೆ ಪೈಲೆಟ್ ಕಂಟ್ರೋಲ್ ರೂಮಿಗೆ ಮಾಹಿತಿಯನ್ನೂ ನೀಡಿದ್ದರು. ಆದರೆ ಬಹ್ಲೋಲ್ ಬಳಿಯ ಮನೆಯೊಂದರ ಮೇಲೆ ಮಿಗ್ 21 ವಿಮಾನ ಅಪ್ಪಳಿಸಿತ್ತು. ಇದಾದ ಬಳಿಕ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು.
ಇದನ್ನೂ ಓದಿ: IAF MIG-21: ಮನೆಗೆ ಅಪ್ಪಳಿಸಿದ ಮಿಗ್ 21 ಯುದ್ಧ ವಿಮಾನ; ಇಬ್ಬರು ಮಹಿಳೆಯರ ದುರ್ಮರಣ
ಮಿಗ್-21 ವಿಮಾನಗಳ ಪತನ ಕಥನ
ರಷ್ಯಾ ನಿರ್ಮಿತ ಮಿಗ್-21 ಯುದ್ಧವಿಮಾನಗಳನ್ನು ದೇಶದ ವಾಯುಪಡೆಗೆ 1960ರ ದಶಕದ ಆರಂಭದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದುವರೆಗೆ ಹೆಚ್ಚಿನ ವಿಮಾನಗಳು ಪತನಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 400 ಮಿಗ್-21 ಯುದ್ಧವಿಮಾನಗಳು ಅಪಘಾತಕ್ಕೀಡಾಗಿವೆ. ಹಾಗೆಯೇ, 200ಕ್ಕೂ ಅಧಿಕ ಪೈಲಟ್‌ಗಳು ಹಾಗೂ 60ಕ್ಕೂ ಹೆಚ್ಚು ನಾಗರಿಕರು ವಿಮಾನಗಳ ಪತನದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ, 1963ರಲ್ಲಿ ಮಿಗ್-21 ಯುದ್ಧವಿಮಾನವು ದೇಶದಲ್ಲಿ ಮೊದಲ ಬಾರಿಗೆ ಪತನಗೊಂಡಿತ್ತು. ಈ ಯುದ್ಧವಿಮಾನಗಳ ಪತನಗಳ ಸಂಖ್ಯೆ ಹೆಚ್ಚಿರುವ ಕಾರಣ, ಬೇರೆ ಯುದ್ಧವಿಮಾನಗಳನ್ನು ವಾಯುಪಡೆಗೆ ಅಳವಡಿಸಿಕೊಳ್ಳಬೇಕು ಎಂಬ ವಾದಗಳು ತುಂಬ ವರ್ಷಗಳಿಂದಲೂ ಕೇಳಿಬರುತ್ತಿವೆ.