Site icon Vistara News

ಬೀದರ್‌ ಏರ್‌ಬೇಸ್‌ನಲ್ಲಿ ಒಟ್ಟಿಗೇ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು; ಏರ್‌ಫೋರ್ಸ್‌ನಲ್ಲಿ ಅಪೂರ್ವ ದಾಖಲೆ!

Dad Daughter

ಬೀದರ್‌: ಕರ್ನಾಟಕದ ಬೀದರ್‌ ಏರ್‌ಬೇಸ್‌ನಲ್ಲಿ ಯುದ್ಧ ವಿಮಾನವೊಂದರ ಎದುರು ದಿಟ್ಟವಾಗಿ, ಹೆಮ್ಮೆಯಿಂದ ನಿಂತ ಅಪ್ಪ-ಮಗಳ ಫೋಟೋ ಈಗ ಎಲ್ಲ ಕಡೆ ತುಂಬ ವೈರಲ್‌ ಆಗುತ್ತಿದೆ. ಈ ಅಪ್ಪ-ಮಗಳು ಜತೆಯಾಗಿ ಯುದ್ಧ ವಿಮಾನ ಹಾರಿಸಿದವರು. ತನ್ಮೂಲಕ ಭಾರತೀಯ ಸೇನಾ ಇತಿಹಾಸದಲ್ಲಿಯೇ ದಾಖಲೆ ಬರೆದವರು.

ಅಪ್ಪ ಸಂಜಯ್‌ ಶರ್ಮಾ ಭಾರತೀಯ ವಾಯುಸೇನೆಯಲ್ಲಿ ಏರ್‌ ಕಮಾಂಡರ್‌, ಮಗಳು ಅನನ್ಯಾ ಶರ್ಮಾ ಫ್ಲೈಯಿಂಗ್‌ ಆಫೀಸರ್‌. ಇವರಿಬ್ಬರೂ ಸೇರಿ ಹಾಕ್‌ ಸೋರ್ಟಿ ಯುದ್ಧ ವಿಮಾನ ಹಾರಿಸಿದ್ದಾರೆ. ಈ ಮೊದಲು ಅಪ್ಪ-ಮಗ ಸೇರಿ ವಿಮಾನ ಹಾರಿಸಿದ ಉದಾಹರಣೆ ಇತ್ತು. ಆದರೆ ತಂದೆ-ಮಗಳು ಜತೆಯಾಗಿ ಯುದ್ಧ ವಿಮಾನ ಹಾರಿಸಿದ್ದು ಇದೇ ಮೊದಲು.

ಅನನ್ಯಾ ಶರ್ಮಾ 2021ರ ಡಿಸೆಂಬರ್‌ನಲ್ಲಿ ಫೈಟರ್‌ ಪೈಲಟ್‌ ಆಗಿ ಭಾರತೀಯ ವಾಯು ಪಡೆ ಸೇರ್ಪಡೆಗೊಂಡಿದ್ದಾರೆ. ತಮ್ಮ ತಂದೆ ಸಂಜಯ್‌ ಶರ್ಮಾ ಅವರೊಂದಿಗೆ 2022ರ ಮೇ 30ರಂದು ಹಾಕ್‌ 132 ರಚನೆಯ ಫೈಟರ್‌ ಜೆಟ್‌ ಹಾರಿಸಿದ್ದಾರೆ ಎಂದು ವಾಯುಪಡೆ ಹೇಳಿದೆ. ʻಭಾರತೀಯ ವಾಯುಸೇನೆಯ ಇತಿಹಾಸದಲ್ಲಿ ತಂದೆ ಮತ್ತು ಮಗಳು ಒಂದೇ ರಚನೆಯ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮಿಷನ್‌ನಲ್ಲಿ ಭಾಗಿಯಾದ ಉದಾಹರಣೆ ಇನ್ನೊಂದಿಲ್ಲ. ಈ ಮಿಷನ್‌ನಲ್ಲಿ ಏರ್‌ ಕಮಾಂಡರ್‌ ಸಂಜಯ್‌ ಶರ್ಮಾ ಮತ್ತು ಫ್ಲೈಯಿಂಗ್‌ ಆಫೀಸರ್‌ ಅನನ್ಯಾ ಅವರು ತಂದೆ-ಮಗಳಾಗಿ ಮಾತ್ರವೇ ಇರಲಿಲ್ಲ. ಬದಲಿಗೆ, ಒಬ್ಬರಲ್ಲಿ ಒಬ್ಬರು ಸಂಪೂರ್ಣ ನಂಬಿಕೆ, ವಿಶ್ವಾಸವನ್ನು ಇರಿಸಿದ ಕಾಮ್ರೇಡ್‌ಗಳಾಗಿ ಕಾರ್ಯನಿರ್ವಹಿಸಿದ್ದರುʼ ಎಂದು ಐಎಎಫ್‌ ಹೇಳಿದೆ.

ಇನ್ನು ಮಗಳೊಂದಿಗೆ ಹಾಕ್‌ ಯುದ್ಧ ವಿಮಾನ ಹಾರಾಟ ನಡೆಸಿದ್ದರ ಬಗ್ಗೆ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ ಸಂಜಯ್‌ ಶರ್ಮಾ ʻನನ್ನ ಮಗಳಿಗೆ ಯುದ್ಧ ವಿಮಾನದ ಪೈಲಟ್‌ ಆಗಬೇಕು ಎಂಬ ಬಯಕೆ ಮೊದಲಿನಿಂದಲೂ ಇತ್ತು. ಅಪ್ಪಾ, ನಿಮ್ಮಂತೆ ನನಗೂ ಯುದ್ಧ ವಿಮಾನದ ಪೈಲಟ್‌ ಆಗಬೇಕೆಂದು ಅನನ್ಯಾ ಸದಾ ಹೇಳುತ್ತಿದ್ದಳು. ನಾವಿಬ್ಬರೂ ಒಂದೇ ಯುದ್ಧ ವಿಮಾನದಲ್ಲಿ ಬೀದರ್‌ ವಾಯುನೆಲೆಯಿಂದ ಹಾರಾಟ ನಡೆಸಿದ್ದು ನನ್ನ ಬದುಕಿನ ಹೆಮ್ಮೆಯ ದಿನʼ ಎಂದಿದ್ದಾರೆ.
ಹಾಗೇ ಮಗಳು ಅನನ್ಯಾ (24) ಕೂಡ ಮಾತನಾಡಿ ʻಯುದ್ಧ ವಿಮಾನಗಳ ಚಾಲನೆಯಲ್ಲಿ ಮಹಿಳೆಯರೇಕಿಲ್ಲ ಎಂದು ಬಾಲ್ಯದಿಂದಲೂ ನಾನು ತಂದೆಯವರಲ್ಲಿ ಕೇಳುತ್ತಿದ್ದೆ. ಈ ಬಗ್ಗೆ ವಿವರಿಸುತ್ತಿದ್ದ ಅವರು ʻಚಿಂತಿಸಬೇಡ. ನೀನು ಅದನ್ನು ಮಾಡುತ್ತೀಯಾʼ ಎಂದು ಹುರಿದುಂಬಿಸುತ್ತಿದ್ದರು. ವಾಯುನೆಲೆಗಳಲ್ಲೇ ಬೆಳೆದು ದೊಡ್ಡವಳಾದ ನನಗೆ, ತಲೆಯ ಮೇಲೆ ಜೆಟ್‌ಗಳು ಹಾರಿದಾಗ, ನನ್ನಪ್ಪ ಅವುಗಳಲ್ಲಿ ಒಂದರ ಚಾಲಕರಾಗಿದ್ದಾರೆ ಎಂಬ ಅರಿವು ಬಹಳ ಸ್ಫೂರ್ತಿಯನ್ನು ತುಂಬುತ್ತಿತ್ತುʼ ಎಂದಿದ್ದಾರೆ.

ಇದನ್ನೂ ಓದಿ: UAV |ಭಾರತೀಯ ಸೇನೆಯ ಚಾಲಕರಹಿತ ವಿಮಾನ ಚಿತ್ರದುರ್ಗದಲ್ಲಿ ಮೊದಲ ಯಶಸ್ವಿ ಹಾರಾಟ

ಸಂಜಯ್‌ ಶರ್ಮಾ 1989ರಲ್ಲಿ ವಾಯುಪಡೆಗೆ ನಿಯೋಜನೆಗೊಂಡಿದ್ದಾರೆ. ಅವರು ಮಿಗ್-‌21 ಯುದ್ಧ ವಿಮಾನಗಳ ಹಾರಾಟದಲ್ಲಿ ಭಾಗಿಯಾದವರು. ಅವರ ಪುತ್ರಿ ಅನನ್ಯಾ 2021ರ ಡಿಸೆಂಬರ್‌ನಲ್ಲಿ ವಾಯುಪಡೆಗೆ ನಿಯೋಜನೆಗೊಂಡಿದ್ದು, ಅಗತ್ಯ ತರಬೇತಿಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ನಂತರ, ಬರುವ ವರ್ಷದ ಜನವರಿಯಿಂದ ಪೂರ್ಣಪ್ರಮಾಣದಲ್ಲಿ ಯುದ್ಧ ವಿಮಾಗಳ ತುಕಡಿಗೆ ಅವರು ನಿಯೋಜನೆಗೊಳ್ಳಲಿದ್ದಾರೆ. ಅಂದಹಾಗೇ, ಅನನ್ಯಾ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ನಲ್ಲಿ ಬಿಟೆಕ್‌ ಓದಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದು, ಬಹಳಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರು ಎಲ್ಲರಿಗೂ ಸ್ಫೂರ್ತಿ ಎಂದು ಟ್ವಿಟರ್‌ನಲ್ಲಿ ಶ್ಲಾಘಿಸಲಾಗುತ್ತಿದೆ. ʻಇಂಥದ್ದನ್ನು ಇನ್ನಷ್ಟು ಕಾಣುವಂತಾಗಲಿʼ ಎಂದು ನಿವೃತ್ತ ಏರ್‌ ಮಾರ್ಷಲ್‌ ಪಿ.ಕೆ. ರಾಯ್‌ ಆಶಿಸಿದ್ದಾರೆ. ʻವೈಭವದ ಗತಕಾಲಕ್ಕೆ ಭರವಸೆಯ ಭವಿಷ್ಯʼ ಎಂದು ಒಬ್ಬರು ನುಡಿದರೆ, ʻಅದ್ಭುತ, ತಂದೆ-ಮಗಳಿಬ್ಬರಿಗೂ ಹೆಮ್ಮೆಯ ಕ್ಷಣʼ ಎಂಬುದು ಇನ್ನೊಬ್ಬರ ಅನಿಸಿಕೆ.

ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಡಿಮಾಂಡ್‌, ವಾಯುಪಡೆಯ 3,000 ಹುದ್ದೆಗಳಿಗೆ 3 ದಿನಗಳಲ್ಲಿ 56,960 ಅರ್ಜಿ ಸ್ವೀಕಾರ

Exit mobile version