Site icon Vistara News

Air India: ಏರ್‌ ಇಂಡಿಯಾ ವಿಮಾನದಲ್ಲಿ ಮತ್ತೆ ಅವಘಡ; ತಪ್ಪಿದ ಭಾರೀ ದುರಂತ; ತುರ್ತು ಭೂ ಸ್ಪರ್ಶ

Air india

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ(Emergency Landing) ಮಾಡಿದೆ. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ಭಾರೀ ಅವಘಡವೊಂದು ತಪ್ಪಿದೆ.

AI 1132 ಏರ್​ ಇಂಡಿಯಾ ವಿಮಾನ ರಾತ್ರಿ 11.20ಕ್ಕೆ ಬೆಂಗಳೂರಿನಿಂದ ಕೊಚ್ಚಿಗೆ ತೆರಳಲು ಟೇಕ್​​ ಆಫ್ ಆಗಿತ್ತು. ಆದರೆ ವಿಮಾನದಲ್ಲಿ ಏಕಾಏಕಿ ಬೆಂಕಿ ಹೊಗೆ ಕಾಣಿಸಿಕೊಂಡಿದೆ. ಕೂಡಲೆ ಪೈಲಟ್​​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಮರ್ಜೆನ್ಸಿ ಲ್ಯಾಂಡ್​ ಮಾಡಿದರು. ಇದರಿಂದ ಭಾರಿ ಅನಾಹುತ ತಪ್ಪಿದೆ. ವಿಮಾನ ಭೂ ಸ್ಪರ್ಶವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಬೆಂಕಿಯನ್ನು ನಂದಿಸಿದ್ದಾರೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿ 170 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್‌ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.

ಮೇ 16ರಂದು ಕೂಡ ಇಂತಹದ್ದೇ ಒಂದು ಘಟನೆ ಪುಣೆಯಲ್ಲಿ ನಡೆದಿತ್ತು,. 180 ಪ್ರಯಾಣಿಕರೊಂದಿಗೆ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಪುಣೆ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಗುರುವಾರ (ಮೇ 16) ಟಗ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಿಂದಾಗಿ ವಿಮಾನಕ್ಕೆ ಹಾನಿಯಾಗಿದ್ದರೂ ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಅಪಘಾತದ ನಂತರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಬಳಿಕ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆಯನ್ನು ಪ್ರಾರಂಭಿಸಿದೆ. ಟಗ್ ಟ್ರಕ್ ಟ್ಯಾಕ್ಸಿಂಗ್ ಪ್ರಕ್ರಿಯೆಯ ಸಮಯದಲ್ಲಿ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಅದಾಗ್ಯೂ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆದವು. ಬಾಧಿತ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಯಿತು. ದುರಸ್ತಿಗೆ ಒಳಗಾದ ವಿಮಾನ ಸದ್ಯ ಕಾರ್ಯಾಚರಣೆಗೆ ಸಿದ್ಧವಾಗಿದೆ.

ಇದನ್ನೂ ಓದಿ:Election Icon: ಹಿಮಾಚಲ ಪ್ರದೇಶದ ಮಂಗಳಮುಖಿ ಈಗ ‘ಚುನಾವಣಾ ಐಕಾನ್’

ಇದಕ್ಕೂ ಮುನ್ನ ಏರ್‌ ಇಂಡಿಯಾ ವಿಮಾನಕ್ಕೆ ಹುಸಿ ಬಾಂಬ್‌ ಕರೆಯೊಂದು ಬಂದು ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ದಿಲ್ಲಿಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್‌ ಪತ್ತೆಯಾಗಿ ಪ್ರಯಾಣಿಕರಲ್ಲಿ ಭಾರೀ ಆತಂಕ ಉಂಟು ಮಾಡಿತ್ತು. ಬೆಳಿಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್‌ ಆಫ್‌ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿತ್ತು ಎನ್ನಲಾಗಿದೆ.

Exit mobile version