Site icon Vistara News

Air India: ವ್ಹೀಲ್‌ಚೇರ್‌ ಸಿಗದೆ ಮೃತಪಟ್ಟ ವೃದ್ಧ; ಏರ್ ಇಂಡಿಯಾಕ್ಕೆ ಬಿತ್ತು ಭಾರೀ ದಂಡ

wheelchair

wheelchair

ನವದೆಹಲಿ: ಕೆಲವು ದಿನಗಳ ಹಿಂದೆ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai Airport) ವ್ಹೀಲ್‌ಚೇರ್‌ (wheelchair) ಸಿಗದೆ 80 ವರ್ಷದ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (Directorate General of Civil Aviation) 30 ಲಕ್ಷ ರೂ. ದಂಡ ವಿಧಿಸಿದೆ.

ಘಟನೆ ಸಂಬಂಧ ಡಿಜಿಸಿಎ ತ್ವರಿತ ಕ್ರಮ ಕೈಗೊಂಡಿದ್ದು, ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿದೆ. ಏಳು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ವಿಚಾರಣೆ ವೇಳೆ ಏರ್ ಇಂಡಿಯಾ ಸಂಸ್ಥೆಯಿಂದ ತಪ್ಪು ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. “ಪ್ರಯಾಣದ ಸಮಯದಲ್ಲಿ ವಿಮಾನಕ್ಕೆ ಏರುವಾಗ ಮತ್ತು ಇಳಿಯುವಾಗ ಸಹಾಯ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ” ಎಂದು ಡಿಜಿಸಿಎ ಹೇಳಿದೆ.

1937ರ ವಿಮಾನಯಾನ ನಿಯಮ ಸಿಎಆರ್ ಸೆಕ್ಷನ್ 3ರ ವಿಶೇಷ ಚೇತನ ವ್ಯಕ್ತಿಗಳು ಅಥವಾ ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳು ಕುರಿತ ಪ್ಯಾರಾ 1ರ ನಿಬಂಧನೆಗಳನ್ನು ಪಾಲಿಸದ ಕಾರಣ ಡಿಜಿಸಿಎ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿದೆ. ಸದ್ಯ ಈ ಕುರಿತು ಏರ್‌ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಘಟನೆಯ ಹಿನ್ನೆಲೆ

ವ್ಹೀಲ್‌ಚೇರ್‌ (wheelchair) ದೊರೆಯದೆ 80 ವರ್ಷದ ವೃದ್ಧರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 12ರಂದು ನಡೆದಿತ್ತು. ಈ ಹಿರಿಯರು ನ್ಯೂಯಾರ್ಕ್‌ನಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದರು. ಈ ವೇಳೆ ಮುಂಬೈ ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್‌ನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದರು.

ಭಾರತೀಯ ಮೂಲದ ಅವರು ಅಮೆರಿಕದ ಪಾಸ್‌ಪೋರ್ಟ್‌ ಹೊಂದಿದ್ದರು. ಪತ್ನಿಯೊಂದಿಗೆ ಭಾರತಕ್ಕೆ ಆಗಮಿಸಿದ್ದ ಅವರು ಮೊದಲೇ ಎರಡು ವ್ಹೀಲ್‌ಚೇರ್‌ ಕಾದಿರಿಸಿದ್ದರು. ಆದರೆ ವ್ಹೀಲ್‌ಚೇರ್‌ ಕೊರತೆ ಕಾರಣದಿಂದ ಎರಡರ ಬದಲು ಒಂದನ್ನಷ್ಟೇ ಒದಗಿಸಲಾಗಿತ್ತು. ಪತ್ನಿಯನ್ನು ವ್ಹೀಲ್‌ಚೇರ್‌ನಲ್ಲಿ ಕೂರಿಸಿ ಅವರು ನಡೆದುಕೊಂಡೇ ಹಿಂಬಾಲಿಸಿದ್ದರು.

ಈ ವಿಮಾನದಲ್ಲಿನ ಸುಮಾರು 32 ಪ್ರಯಾಣಿಕರು ವ್ಹೀಲ್‌ಚೇರ್‌ಗಾಗಿ ಬೇಡಿಕೆ ಸಲ್ಲಿಸಿದ್ದರು. ಆದರೆ 15 ವ್ಹೀಲ್‌ಚೇರ್‌ ಮಾತ್ರವೇ ಲಭ್ಯವಿತ್ತು. ಹೀಗಾಗಿ ಅವರಿಗೆ ಸಹಾಯ ಮಾಡಲು ಸಿಬ್ಬಂದಿ ಮುಂದಾಗಿದ್ದರು. ʼʼವ್ಹೀಲ್‌ಚೇರ್ ಒದಗಿಸುವವರೆಗೆ ಕಾಯುವಂತೆ ವಿನಂತಿಸಲಾಯಿತು. ಆದರೆ ಅವರು ತಮ್ಮ ಸಂಗಾತಿಯೊಂದಿಗೆ ನಡೆಯಲು ನಿರ್ಧರಿಸಿದರುʼʼ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದರು.

ಇದನ್ನೂ ಓದಿ: Mumbai Airport: ವ್ಹೀಲ್‌ಚೇರ್‌ ದೊರೆಯದೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ವೃದ್ಧ

ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಏರ್ ಇಂಡಿಯಾ ವಕ್ತಾರರು ಇದನ್ನು ʼದುರದೃಷ್ಟಕರ ಘಟನೆʼ ಎಂದು ಕರೆದಿದ್ದಾರೆ. ʼʼಅನಾರೋಗ್ಯಕ್ಕೆ ಒಳಗಾದ ನಂತರ ಅವರಿಗೆ ಚಿಕಿತ್ಸೆ ನೀಡುತ್ತಿರುವ ವಿಮಾನ ನಿಲ್ದಾಣದ ವೈದ್ಯರ ಸಲಹೆಯಂತೆ, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ನಿಧನರಾದರು” ಎಂದು ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version