Site icon Vistara News

Air India: ಟಗ್ ಟ್ರ್ಯಾಕ್ಟರ್‌ಗೆ 180 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಡಿಕ್ಕಿ; ತಪ್ಪಿದ ಭಾರೀ ದೊಡ್ಡ ದುರಂತ

Air India

Air India

ಮುಂಬೈ: 180 ಪ್ರಯಾಣಿಕರೊಂದಿಗೆ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನವು ಪುಣೆ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಗುರುವಾರ (ಮೇ 16) ಟಗ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ. ಡಿಕ್ಕಿಯಿಂದಾಗಿ ವಿಮಾನಕ್ಕೆ ಹಾನಿಯಾಗಿದ್ದರೂ ಅದೃಷ್ಟವಶಾತ್‌ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ʼʼಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ಬಳಿ ಮತ್ತು ಟೈರ್‌ಗೆ ಹಾನಿಯಾಗಿದೆ. ಅಪಘಾತದ ಹೊರತಾಗಿಯೂ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆʼʼ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ಬಳಿಕ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆಯನ್ನು ಪ್ರಾರಂಭಿಸಿದೆ. ಟಗ್ ಟ್ರಕ್ ಟ್ಯಾಕ್ಸಿಂಗ್ ಪ್ರಕ್ರಿಯೆಯ ಸಮಯದಲ್ಲಿ ವಿಮಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಅದಾಗ್ಯೂ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆದವು. ಬಾಧಿತ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಯಿತು. ದುರಸ್ತಿಗೆ ಒಳಗಾದ ವಿಮಾನ ಸದ್ಯ ಕಾರ್ಯಾಚರಣೆಗೆ ಸಿದ್ಧವಾಗಿದೆ.

ಬಾಂಬ್‌ ಬೆದರಿಕೆ

ಗುರುವಾರ ಏರ್‌ ಇಂಡಿಯಾ ವಿಮಾನಕ್ಕೆ ಹುಸಿ ಬಾಂಬ್‌ ಕರೆಯೊಂದು ಬಂದು ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ದಿಲ್ಲಿಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬಾಂಬ್‌ ಎಂದು ಬರೆದಿರುವ ಟಿಶ್ಯೂ ಪೇಪರ್‌ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್‌ ಪತ್ತೆಯಾಗಿ ಪ್ರಯಾಣಿಕರಲ್ಲಿ ಭಾರೀ ಆತಂಕ ಉಂಟು ಮಾಡಿತ್ತು. ಬೆಳಿಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್‌ ಆಫ್‌ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿತ್ತು ಎನ್ನಲಾಗಿದೆ.

ಘಟನೆ ವರದಿಯಾಗುತ್ತಿದ್ದಂತೆ ಎಲ್ಲ ಪ್ರಯಾಣಿಕರನ್ನು ತಕ್ಷಣ ಇಳಿಸಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಗೆ ಮಾಹಿತಿ ನೀಡಲಾಗಿತ್ತು. ಸಿಐಎಸ್‌ಎಫ್‌ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು. ನಂತರ ಪ್ರಯಾಣಿಕರನ್ನು ವಡೋದರಾಕ್ಕೆ ಮತ್ತೊಂದು ವಿಮಾನದಲ್ಲಿ ಕಳುಹಿಸಲಾಯಿತು. ವಿಮಾನದಲ್ಲಿ ಯಾವುದೇ ಬಾಂಬ್‌ ಅಥವಾ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಇದು ಕೂಡ ಒಂದು ಹುಸಿ ಬಾಂಬ್‌ ಕರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಬುಧವಾರ ಕಾನ್ಪುರ ಶಾಲೆಗಳಿಗೆ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ಕಾನ್ಪುರದ ಸುಮಾರು 10 ಶಾಲೆಗಳು ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದವು. ಇಮೇಲ್‌ ಮೂಲಕ ಈ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌, ಅಹಮದಾಬಾದ್‌ ಶಾಲೆಗಳಿಗೆ ಬಂದ ರಷ್ಯಾದ ಅದೇ ಸರ್ವರ್‌ಗೆ ಲಿಂಕ್ ಮಾಡಲಾದ ಇಮೇಲ್ ಮೂಲಕ ಕಾನ್ಪುರ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿ ತಿಳಿಸಿದೆ. ಪೊಲೀಸರು ಈ ಬಗ್ಗೆ ತನಿಖೆಗೆ ನಡೆಸುತ್ತಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ: Air India : ಸೇಫ್ಟಿ ಫಸ್ಟ್​​; ಏರ್ ಇಂಡಿಯಾಗೆ 80 ಲಕ್ಷ ದಂಡ

Exit mobile version