ನವದೆಹಲಿ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಗುರುವಾರ ಮಧ್ಯಾಹ್ನ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ (Air India Flight) 20 ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದೆ ವಿಮಾನದೊಳಗೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಮಾನ ಇಂದು (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಹೊರಡಲಿದೆ.
ಗುರುವಾರ ಪತ್ರಕರ್ತೆ ಶ್ವೇತಾ ಪುಂಜ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಸಿ ಇಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ʼʼಫ್ಲೈಟ್ ನಂ. ಎಐ 183 ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಲಾಯಿತು. ಹವಾ ನಿಯಂತ್ರಣವಿಲ್ಲದೆ ಹಲವರು ಪರದಾಡಿದರು. ಈ ವೇಳೆ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಪ್ರಯಾಣಿಕರಿಗೆ ವಿಮಾನದಿಂದ ನಿರ್ಗಮಿಸಲು ತಿಳಿಸಲಾಯಿತುʼʼ ಎಂದು ಅವರು ಬರೆದುಕೊಂಡಿದ್ದಾರೆ.
If there is a privatisation story that has failed it is @airindia @DGCAIndia AI 183 flight has been delayed for over 8 hours , passengers were made to board the plane without air conditioning, and then deplaned after some people fainted in the flight.This is inhuman! @JM_Scindia pic.twitter.com/86KpaOAbgb
— Shweta Punj (@shwwetapunj) May 30, 2024
ದೆಹಲಿಯಲ್ಲಿ ಉಷ್ಣಾಂಶ ದಾಖಲೆಯ ಮಟ್ಟಕ್ಕೆ ಏರಿದೆ. ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ 52.9 ಡಿಗ್ರಿ ಸೆಲ್ಶಿಯಸ್ ತಾಪಮಾನ ಕಂಡು ಬಂದಿತ್ತು. ʼʼಇದು ಖಾಸಗೀಕರಣ ವಿಫಲವಾಗಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಎಐ 183 ವಿಮಾನವು ಎಂಟು ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿದೆ. ಪ್ರಯಾಣಿಕರನ್ನು ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ವಿಮಾನವನ್ನು ಹತ್ತಿಸಿದ್ದು ಅಮಾನವೀಯ” ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟ್ಯಾಗ್ ಮಾಡಿ ಶ್ವೇತಾ ಪುಂಜ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಏರ್ ಇಂಡಿಯಾ ಹೇಳಿದ್ದೇನು?
ಶ್ವೇತಾ ಪುಂಜ್ ಅವರ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಏರ್ ಇಂಡಿಯಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ʼʼಈ ಘಟನೆಗಾಗಿ ವಿಷಾಧ ವ್ಯಕ್ತಪಡಿಸುತ್ತಿದ್ದೇವೆ. ನಮ್ಮ ತಂಡದವರು ಸೂಕ್ತವಾಗಿ ಸ್ಪಂದಿಸಲಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆʼʼ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಪ್ರಯಾಣಿಕ ಅಭಿಷೇಕ್ ಶರ್ಮಾ ತ್ವರಿತ ಕ್ರಮಕ್ಕಾಗಿ ವಿಮಾನಯಾನ ಸಂಸ್ಥೆಗೆ ಮನವಿ ಮಾಡಿದ್ದಾರೆ. ಬೋರ್ಡಿಂಗ್ ಪ್ರದೇಶದಲ್ಲಿ ಸಿಲುಕಿರುವ ಹಿರಿಯ ನಾಗರಿಕರಿಗೆ ಮನೆಗೆ ಹೋಗಲು ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ. ಅನೇಕ ಪ್ರಯಾಣಿಕರು ಪೋಸ್ಟ್ ಮಾಡಿದ ದೃಶ್ಯಗಳಲ್ಲಿ ಮಕ್ಕಳು ಸೇರಿದಂತೆ ಹಿರಿಯ ನಾಗರಿಕರು ನೆಲದ ಮೇಲೆ ಕುಳಿತಿರುವುದನ್ನು ಕಂಡು ಬಂದಿದೆ.
ಇದನ್ನೂ ಓದಿ: Air India: ನಿಯಮ ಉಲ್ಲಂಘಿಸಿದ ಏರ್ ಇಂಡಿಯಾಕ್ಕೆ ಬಿತ್ತು ಭಾರೀ ದಂಡ
ಕೆಲವು ತಿಂಗಳ ಹಿಂದೆ ಇಂತಹದ್ದೇ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಬೆಂಗಳೂರಿಗೆ ಡಿ. 23ರ ರಾತ್ರಿ 8.15ಕ್ಕೆ ಮಂಗಳೂರಿನಿಂದ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೇ ಕ್ಷಣದಲ್ಲಿ ರದ್ದಾಗಿತ್ತು. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 8.15ಕ್ಕೆ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ವಿಮಾನ ಬಾರದ ಕಾರಣದಿಂದ ಆಕ್ರೋಶಗೊಂಡಿದ್ದರು. ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿದ್ದವರು, ಪರೀಕ್ಷೆ ಬರೆಯಲು ಹೊರಟವರು ಹಾಗೂ ಕ್ರಿಸ್ಮಸ್ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ವಿಮಾನ ಬಾರದ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿ ಆಗಿದ್ದರು. ರಾತ್ರಿ 8.15ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ವಿಮಾನ ನಿಲ್ದಾಣದಲ್ಲಿಯೇ ನಡುರಾತ್ರಿಯವರೆಗೆ ಕಾದು ಕುಳಿತು ಬಳಿಕ ಪ್ರಯಾಣಿಸಿದ್ದರು.