ನವೆದಹಲಿ: ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಗೆ ಹೊಡೆದ ಹಿನ್ನೆಲೆಯಲ್ಲಿ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು (Air India) ಸೋಮವಾರ ವಾಪಸ್ ದೆಹಲಿಗೆ ಮರಳಿದೆ. ಬಳಿಕ ಸಿಬ್ಬಂದಿ ಜತೆಗೆ ಜಗಳವಾಡಿದ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿ, ಆತನ ವಿರುದ್ಧ ದೂರು ಕೂಡ ದಾಖಲಿಸಿದೆ. ಸೋಮವಾರ ಬೆಳಗ್ಗೆ 6.35ಕ್ಕೆ ಏರ್ ಇಂಡಿಯಾ ವಿಮಾನವು ದಿಲ್ಲಿಯಿಂದ ಲಂಡನ್ ನಗರದತ್ತ ಪ್ರಯಾಣ ಬೆಳೆಸಿತು. ಆದರೆ, ಸ್ವಲ್ಪ ಹೊತ್ತಿನಲ್ಲೇ ಮತ್ತೆ ವಿಮಾನ ವಾಪಸ್ ದಿಲ್ಲಿಗೆ ಮರಳಿತು.
ಸೋವಾರ ಬೆಳಗ್ಗೆ 6.35ಕ್ಕೆ ದಿಲ್ಲಿ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಪ್ರಯಾಣಿಕರೊಬ್ಬರು ಸಿಬ್ಬಂದಿ ಜತೆಗೆ ಜಗಳವಾಡಲು ಆರಂಭಿಸಿದರು. ಆಗ ವಿಮಾನವು ಮತ್ತೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದು, ಜಗಳವಾಡುತ್ತಿದ್ದ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿ ಮತ್ತೆ ಲಂಡನ್‌ನತ್ತ ತನ್ನ ಪ್ರಯಾಣವನ್ನು ಬೆಳೆಸಿತು.
”2023 ಏಪ್ರಿಲ್ 10 ರಂದು ದಿಲ್ಲಿಯಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಫ್ಲೈಟ್ ಎಐ 111 ವಿಮಾನದಲ್ಲಿದ್ದ ಪ್ರಯಾಣಿಕರ ಗಂಭೀರ ಅಶಿಸ್ತಿನ ವರ್ತನೆಯಿಂದಾಗಿ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ದಿಲ್ಲಿಗೆ ಮರಳಿತು. ಮೌಖಿಕ ಮತ್ತು ಲಿಖಿತ ಎಚ್ಚರಿಕೆಗಳಿಗೆ ಕಿವಿಗೊಡದೆ, ಪ್ರಯಾಣಿಕರು ಇಬ್ಬರು ಕ್ಯಾಬಿನ್ ಸಿಬ್ಬಂದಿಗೆ ದೈಹಿಕ ಹಲ್ಲೆ ಮಾಡುವುದು ಸೇರಿದಂತೆ ಅಶಿಸ್ತಿನ ವರ್ತನೆಯನ್ನು ಮುಂದುವರೆಸಿದರು. ಹಾಗಾಗಿ, ಪೈಲಟ್ ಇನ್ ಕಮಾಂಡ್ ಅವರು ವಾಪಸ್ ದಿಲ್ಲಿಗೆ ಮರಳಲು ನಿರ್ಧರಿಸಿದರು ಮತ್ತು ಗಲಾಟೆ ನಿರತ ಪ್ರಯಾಣಿಕನನ್ನು ಲ್ಯಾಂಡಿಂಗ್ ನಂತರ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು,” ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನ್ಯಾಯಾಧೀಶರಿಗೇ ಕಾನೂನು ಪಾಠ ಹೇಳಿ, 250 ರೂ.ಕೊಡ್ತೇನೆ ಎಂದ ಏರ್ ಇಂಡಿಯಾ ಪ್ರಯಾಣಿಕ; ಜೈಲು ಶಿಕ್ಷೆ ವಿಧಿಸಿದ ಜಡ್ಜ್!
ವಿಮಾನದಲ್ಲಿ ಸಿಬ್ಬಂದಿ ಜತೆ ಪ್ರಯಾಣಿಕರು ಅನುಚಿತವಾಗಿ ವರ್ತಿಸುವ, ಜಗಳವಾಡುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಕಳೆದ ತಿಂಗಳು ಲಂಡನ್‌ನಿಂದ ಮುಂಬೈ ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡುತ್ತಿದ್ದರು. ಅವರ ಈ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಾಗಿತ್ತು. ಈ ವರ್ಷದ ಆರಂಭದಲ್ಲಿ, ನವೆಂಬರ್ ಮೂತ್ರ ವಿಸರ್ಜನೆ ಪ್ರಕರಣದಲ್ಲಿ ನಿಯಮಗಳನ್ನು ಅನುಸರಿಸಲು ವಿಫಲವಾದ ಕಾರಣ ಏರ್ ಇಂಡಿಯಾಗೆ ಸಂಸ್ಥೆಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ಪ್ರಯಾಣಿಕರು ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಈ ಪ್ರಕರಣ ಭಾರೀ ಸುದ್ದಿ ಮಾಡಿತ್ತು.