ನವದೆಹಲಿ: ದಿಲ್ಲಿಯಿಂದ (New Delhi) ಸ್ಯಾನ್ ಫ್ರಾನ್ಸಿಸ್ಕೋಗೆ (San Fransisco) ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಪ್ರಯಾಣಿಕರೊಬ್ಬರ ಕಾಲ ಮೇಲೆ ವಿಮಾನ ಸಿಬ್ಬಂದಿ ಬಿಸಿ ನೀರು (Hot Water) ಚೆಲ್ಲಿದ ಘಟನೆ ನಡೆದಿದೆ. ಬಿಸಿ ನೀರಿನ ತೀವ್ರತೆಗೆ ಪ್ರಯಾಣಿಕರ ಕಾಲಿನ ಚರ್ಮ ಕಿತ್ತು ಬಂದಿದೆ. ತೀವ್ರವಾಗಿ ಗಾಯಗೊಂಡಿದ್ದರೂ ಪ್ರಯಾಣಿಕ ಮಹಿಳೆಯನ್ನು ಸರಿಯಾಗಿ ಉಪಚರಿಸದೇ ಇದ್ದದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಂತ್ರಸ್ತ ಮಹಿಳಾ ಪ್ರಯಾಣಿಕ ಚಾರು ತೋಮರ್ ಅವರು, ಏರ್ ಇಂಡಿಯಾ ಸಿಬ್ಬಂದಿಯ ತರಬೇತಿ ಮತ್ತು ವೃತ್ತಿಪರತೆಯ ಕೊರತೆಯ ಗುಣಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಚಾರು ತೋಮರ್ ಅವರು ತಮ್ಮ ನಾಲ್ಕು ವರ್ಷದ ಮಗ ಮತ್ತು 83 ವರ್ಷದ ಅತ್ತೆಯೊಂದಿಗೆ ದಿಲ್ಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದರು. ಚಾರು ಅವರ ಬಲಗಾಲಿನ ಮೇಲೆ ವಿಮಾನ ಸಿಬ್ಬಂದಿ ಕೈಯಿಂದ ಬಿಸಿ ನೀರು ಬಿತ್ತು. ವಿಪರೀತ ನೋವು ಅನುಭವಿಸಲಾರಂಭಿಸಿದರು. ಇಷ್ಟಾಗಿಯೂ ಸಿಬ್ಬಂದಿ ಅವರಿಗೆ ಆರೈಕೆ ಮಾಡುವ ಬದಲು, ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೋಡಿದರು ಎಂದು ಅವರು ಹೇಳಿದ್ದಾರೆ.
ತೀವ್ರ ನೋವಿನಿಂದ ಬಳಲುತ್ತಿದ್ದ ಚಾರು ಅವರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರೊಬ್ಬರು ವೈದ್ಯಕೀಯ ಸಹಾಯ ಮಾಡಿದ್ದಾರೆ. ಹಾಗಿದ್ದೂ, ಯಾವುದೇ ತುರ್ತು ಪರಿಸ್ಥಿತಿಗೆ ಬೇಕಾದ ವೈದ್ಯಕೀಯ ಸಾಮಗ್ರಿಗಳು ಇರಲಿಲ್ಲ. ಯಾವುದೇ ನೋವು ಔಷಧಿ ಅಥವಾ ಸರಿಯಾದ ಪ್ರಥಮ ಚಿಕಿತ್ಸಾ ಕಿಟ್ ಲಭ್ಯವಿಲ್ಲದೇ ನಾನು ಸುಮಾರು ಎರಡು ಗಂಟೆಗಳ ಕಾಲ ತೀವ್ರ ನೋವನ್ನು ಅನುಭವಿಸಿದೆ ಚಾರು ತೋಮರ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಹೊಲಸು ಮಾಡಿದ ಪ್ರಯಾಣಿಕ; ಮಲ-ಮೂತ್ರ ವಿಸರ್ಜಿಸಿ, ಗಲಾಟೆ
ಕ್ಷಮೆ ಕೋರಿದ ಏರ್ ಇಂಡಿಯಾ ವಿಮಾನ ಸಂಸ್ಥೆ
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲ್ಯಾಂಡ್ ಆದ ಬಳಿಕವೂ ಏರ್ ಇಂಡಿಯಾ ವಿಮಾನ ಸಿಬ್ಬಂದಿ ವೃತ್ತಿಪರತೆಯನ್ನು ಮೆರೆಯಲಿಲ್ಲ. ಅವರಿಗೆ ನನ್ನನ್ನು ಉಪಚಿಸುವುದಕ್ಕಿಂತ ಲ್ಯಾಂಡಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುವುದೇ ಹೆಚ್ಚಾಗಿತ್ತು ಎಂದು ದೂರಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಸಂಸ್ಥೆಯು, ಕ್ಷಮೆಯಾಚಿಸಿದೆ. ವಿಮಾನ ಸಿಬ್ಬಂದಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿದರು ಮತ್ತು ಅರೆವೈದ್ಯರ ತಂಡವು ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದ ಚಾರು ಅವರಿಗೆ ಸಹಾಯ ಮಾಡಿತು. ನಾವು ಅತಿಥಿಗಳಿಗೆ ನಮ್ಮ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಿದ್ದೇವೆ, ವೈದ್ಯಕೀಯ ಆರೈಕೆ ಸೇರಿದಂತೆ ಎಲ್ಲಾ ಹೆಚ್ಚಿನ ಸಹಾಯವನ್ನು ನೀಡಲು ನಮ್ಮ ತಂಡಗಳು ಸಂಪರ್ಕದಲ್ಲಿವೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.