ನವ ದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಕಳೆದ ವರ್ಷ ನವೆಂಬರ್ 26ರಂದು ಶಂಕರ್ ಮಿಶ್ರಾ ಎಂಬಾತ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಯುಎಸ್ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಈ ಹೊಲಸು ಘಟನೆ ನಡೆದಿತ್ತು. ಕುಡಿದು, ಸಂಪೂರ್ಣ ಅಮಲೇರಿದ ಸ್ಥಿತಿಯಲ್ಲಿ ಇದ್ದ ಶಂಕರ್ ಮಿಶ್ರಾ ತನ್ನ ಪಕ್ಕದ ಸಾಲಿನಲ್ಲಿ ಕುಳಿತಿದ್ದ 70 ವರ್ಷದ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಸಿದ್ದ. ಆದರೆ ಘಟನೆ ನಡೆದ ದಿನವೇ ಅದು ಬೆಳಕಿಗೆ ಬಂದಿರಲಿಲ್ಲ. ಬಳಿಕ ಮಹಿಳೆ, ಏರ್ ಇಂಡಿಯಾ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರಿಗೆ ಪತ್ರ ಬರೆದು ವಿಷಯ ತಿಳಿಸಿದಾಗಲೇ ವಿಷಯ ಬಹಿರಂಗಗೊಂಡಿತ್ತು.
ತನ್ನ ಮೇಲೆ ಶಂಕರ್ ಮಿಶ್ರಾ ಮೂತ್ರ ಮಾಡಿದಾಗಿನ ಸಂದರ್ಭವನ್ನು ಏರ್ ಇಂಡಿಯಾ ಸಿಬ್ಬಂದಿ ಸರಿಯಾಗಿ ನಿಭಾಯಿಸಲಿಲ್ಲ. ಇದೊಂದು ಅತ್ಯಂತ ಸೂಕ್ಷ್ಮವಾದ ಸನ್ನಿವೇಶ. ಬೇರೆ ಸೀಟ್ ಕೇಳಿದರೂ ಕೊಡಲು ಹಿಂದೇಟು ಹಾಕಿದರು. ಆತನ ಮುಖ ನೋಡಲು ಇಷ್ಟವಿಲ್ಲ ಎಂದರೂ ಬಲವಂತವಾಗಿ ನನ್ನೆದುರು ಕರೆದುಕೊಂಡು ಬಂದು ನಿಲ್ಲಿಸಿ ಕ್ಷಮೆ ಕೇಳಿಸಿದರು ಎಂಬಿತ್ಯಾದಿ ಆರೋಪಗಳನ್ನು ಮಹಿಳೆ ಮಾಡಿದ್ದರು. ‘ಹೌದು ನಮ್ಮಿಂದ ತಪ್ಪಾಗಿದೆ. ವಿಮಾನದಲ್ಲಿ ಶಂಕರ್ ಮಿಶ್ರಾ ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ಮಾಡಿದಾಗಿನ ಸಂದರ್ಭವನ್ನು ಏರ್ ಇಂಡಿಯಾ ಸಿಬ್ಬಂದಿ ಇನ್ನಷ್ಟು ಸಮರ್ಪಕವಾಗಿ ನಿಭಾಯಿಸಬಹುದಿತ್ತು ಎಂದು ಎನ್. ಚಂದ್ರಶೇಖರನ್ ಕೂಡ ಒಪ್ಪಿಕೊಂಡಿದ್ದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ DGCA ಕಳೆದ ವಾರ ಏರ್ ಇಂಡಿಯಾದ ಅಕೌಂಟೆಬಲ್ ಮ್ಯಾನೇಜರ್, ಅಂದು ಇದ್ದ ಪೈಲೆಟ್ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಇನ್ ಪ್ಲೈಟ್ ಸರ್ವೀಸ್ ಡೈರೆಕ್ಟರ್ಗಳಿಗೆ ಶೋಕಾಸ್ ನೋಟಿಸ್ ನೀಡಿತ್ತು. ಶಂಕರ್ ಮಿಶ್ರಾ ಅಷ್ಟು ದೊಡ್ಡ ಅಪರಾಧ ಮಾಡಿದ್ದರೂ, ಆತನ ವಿರುದ್ಧ ತತ್ಕ್ಷಣದ ಕ್ರಮ ಯಾಕೆ ತೆಗೆದುಕೊಂಡಿಲ್ಲ’ ಎಂದು ಪ್ರಶ್ನಿಸಿತ್ತು. ಈಗ ಏರ್ ಇಂಡಿಯಾಕ್ಕೆ ಭರ್ಜರಿ ದಂಡವನ್ನು ವಿಧಿಸುವ ಜತೆ, ಪ್ಲೈಟ್ ಕಮಾಂಡರ್ (ಕ್ಯಾಪ್ಟನ್ ಪೈಲೆಟ್) ಲೈಸೆನ್ಸ್ನ್ನು ಮೂರು ತಿಂಗಳ ಅವಧಿಗೆ ರದ್ದುಗೊಳಿಸಿದೆ. ಅಷ್ಟೇ ಅಲ್ಲ, ಏರ್ ಇಂಡಿಯಾ ಪ್ಲೈಟ್ ಇನ್ ಸರ್ವೀಸ್ ಡೈರೆಕ್ಟರ್ಗೂ 3 ಲಕ್ಷ ರೂ. ದಂಡ ವಿಧಿಸಿದೆ. ಸದ್ಯ ಶಂಕರ್ ಮಿಶ್ರಾ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ.
ಇದನ್ನೂ ಓದಿ: Shankar Mishra Case | ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಶಂಕರ್ ಮಿಶ್ರಾ 4 ತಿಂಗಳು ವಿಮಾನ ಸಂಚಾರ ನಿಷೇಧ