Site icon Vistara News

Air India: ಬದಲಾಗಲಿದೆ ಏರ್‌ ಇಂಡಿಯಾ ಸಿಬ್ಬಂದಿ ಸಮವಸ್ತ್ರ; ಸೀರೆ ಬದಲು ಚೂಡಿದಾರ್‌?

airindia

airindia

ನವ ದೆಹಲಿ: ಏರ್‌ ಇಂಡಿಯಾ (Air India) ಸಿಬ್ಬಂದಿಯ ಸಮವಸ್ತ್ರ ಇನ್ನು ಮಂದೆ ಬದಲಾಗಲಿದೆ. ಸುಮಾರು 60 ವರ್ಷಗಳ ಕಾಲ ಭಾರತೀಯ ಸಾಂಪ್ರದಾಯಿಕ ಉಡುಪು ಸೀರೆಯಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಇನ್ನು ಮುಂದೆ ಹೊಸ ರೀತಿಯ ಉಡುಗೆ ಸಿಗಲಿದೆ. ವರ್ಷಾಂತ್ಯದಲ್ಲಿ ಸಮವಸ್ತ್ರ (uniform) ಬದಲಾಗಲಿದೆ ಎಂದು ಮೂಲಗಳು ತಿಳಿಸಿವೆ. 6 ದಶಕಗಳ ಕಾಲ ಸೀರೆ ಧರಿಸಿಕೊಂಡು ಪ್ರಯಾಣಿಕರನ್ನು ಸ್ವಾಗತಿಸುತ್ತಿದ್ದ ಏರ್‌ ಇಂಡಿಯಾ ಸಿಬ್ಬಂದಿ ಇನ್ನು ಮುಂದೆ ಆಧುನಿಕ ಉಡುಗೆ ಮೂಲಕ ಕಾಣಿಸಿಕೊಳ್ಳಲಿರುವುದು ಖಚಿತವಾಗಿದೆ.

ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್‌ ಮಲ್ಹೋತ್ರ ಹೊಸ ಸಮವಸ್ತ್ರದ ವಿನ್ಯಾಸ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯ ಅವರು ನಾನ್‌ ಡಿಸ್‌ಕ್ಲೋಷರ್‌ ಅಗ್ರಿಮೆಂಟ್‌ (NDA) ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದಾಗ್ಯೂ ಹೊಸ ಸಮವಸ್ತ್ರ ಸಾಂಪ್ರದಾಯಿಕವಾಗಿಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳು ಹೇಳಿದ್ದೇನು?

ಸದ್ಯದ ಬೆಳವಣಿಗೆ ಪ್ರಕಾರ ಸೀರೆಯನ್ನು ಸಮವಸ್ತ್ರದ ಪಟ್ಟಿಯಿಂದ ಸಂಪೂರ್ಣ ಹೊರಗಿಡಲಾಗುತ್ತದೆ. ಮಹಿಳೆಯರಿಗೆ ಚೂಡಿದಾರ್‌ ಮತ್ತು ಪುರುಷ ಸಿಬ್ಬಂದಿಗೆ ಸೂಟ್‌ ಸಮವಸ್ತ್ರವಾಗಿ ದೊರೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಇನ್ನೊಬ್ಬ ಅಧಿಕಾರಿಯ ಪ್ರಕಾರ, ಸೀರೆಯನ್ನು ಸಂಪೂರ್ಣವಾಗಿ ಸಮವಸ್ತ್ರದಿಂದ ಹೊರಗಿಡಲಾಗುವುದಿಲ್ಲವಂತೆ. “ವಿಮಾನಯಾನ ಸಂಸ್ಥೆಗೆ ಸಮವಸ್ತ್ರವಾಗಿ ವಿವಿಧ ಆಯ್ಕೆಗಳನ್ನು ನೀಡಲಾಯಿತು. ಅದರಲ್ಲಿ ಸೀರೆಯಂತೆ ಕಾಣುವ ಆದರೆ ಸಾಂಪ್ರದಾಯಿಕ ಸೀರೆಗಳಿಗಿಂತ ಭಿನ್ನವಾದ ಸೀರೆಗಳಿಗೆ ಒಪ್ಪಿಗೆ ಸೂಚಿಸಿತ್ತು. ಆದಾಗ್ಯೂ, ಅವುಗಳನ್ನು ಆಡಳಿತ ಮಂಡಳಿ ಅಂತಿಮಗೊಳಿಸಿಲ್ಲʼʼ ಎಂದು ಅವರು ತಿಳಿಸಿದ್ದಾರೆ.

ಹೊಸ ಸಮವಸ್ತ್ರ ಸೀರೆ ಅಭಿಮಾನಿಗಳಿಗೆ ಬೇಸರ ಮೂಡಿಸುವ ಸಾಧ್ಯತೆ ಇದೆ. 1962ರ ತನಕ ವಿಮಾನ ಸಿಬ್ಬಂದಿ ಸ್ಕರ್ಟ್‌, ಜಾಕೆಟ್‌ ಮತ್ತು ಹ್ಯಾಟ್‌ ಧರಿಸುತ್ತಿದ್ದರು. ದಿ. ಜೆ.ಆರ್‌.ಡಿ. ಟಾಟಾ ಸೀರೆಯನ್ನು ಸಮವಸ್ತ್ರವಾಗಿಸುವ ಬಗ್ಗೆ ಪ್ರಸ್ತಾವ ಮಂಡಿಸಿದ್ದರು. ಬಳಿಕ ಇದನ್ನು ಅಂಗೀಕರಿಸಲಾಯಿತು. ಆರಂಭದಲ್ಲಿ ಸೀರೆಗಳನ್ನು ಬಿನ್ನಿ ಮಿಲ್‌ನಿಂದ ಪಡೆದುಕೊಳ್ಳಲಾಗಿತ್ತು.

ಸಮವಸ್ತ್ರ ಬದಲಾವಣೆ ಬಗ್ಗೆ ನಿವೃತ್ತ ಸಿಬ್ಬಂದಿಯೊಬ್ಬರು ಪ್ರತಿಕ್ರಿಯಿಸಿ, ನಮಗೆ ಆರಂಭಿಕ ದಿನಗಳಲ್ಲಿ ಸೀರೆಯನ್ನು ಹೇಗೆ ಧರಿಸುವುದು ಎಂದು ಹೇಳಿಕೊಟ್ಟಿದ್ದರು. ಬಳಿಕ ಸೀರೆಯಲ್ಲಿ ಕೆಲಸ ನಿರ್ವಹಿಸಲು ಖುಷಿಯಾಗುತ್ತಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಯಾವ ಬಣ್ಣ?

ಸದ್ಯದ ಮಾಹಿತಿ ಪ್ರಕಾರ ಹೊಸ ಸಮವಸ್ತ್ರದ ಬಣ್ಣ ವಿಮಾನದ ಬಣ್ಣವಾದ ಕಡುಗೆಂಪು, ಹಳದಿ(ಚಿನ್ನದ ಬಣ್ಣ)ಯಲ್ಲಿರಲಿದೆ. ವಿಲೀನದ ನಂತರ, ವಿಸ್ತಾರ ಕ್ಯಾಬಿನ್ ಸಿಬ್ಬಂದಿಯ ಉಡುಗೆಯೂ ಏರ್ ಇಂಡಿಯಾ ಸಿಬ್ಬಂದಿಯಂತೆಯೇ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್;‌ ಮಣಿಪುರ ಮತ್ತೆ ಉದ್ವಿಗ್ನ?

ವಿಮಾನಯಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕ (MD) ಕ್ಯಾಂಪ್ಬೆಲ್ ವಿಲ್ಸನ್, ಆಗಸ್ಟ್ 10ರಂದು ನಡೆದ ಮರುನಾಮಕರಣ ಕಾರ್ಯಕ್ರಮದಲ್ಲಿ, ವಿಮಾನಯಾನದ ಹೊಸ ಉಡುಗೆಯನ್ನು ಮೊದಲು ಎ 350 ವಿಮಾನದಲ್ಲಿ ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು. ನವೆಂಬರ್‌ನಲ್ಲಿ ಈ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ.

Exit mobile version