ಕಾಠ್ಮಂಡು, ನೇಪಾಳ: ಏರ್ ಇಂಡಿಯಾ (Air India) ಮತ್ತು ನೇಪಾಳ ಏರ್‌ಲೈನ್ಸ್ (Nepal Airlines) ವಿಮಾನಗಳು ಆಕಾಶದಲ್ಲಿ ಪರಸ್ಪರ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ಪಾರಾದ ಘಟನೆ ಶುಕ್ರವಾರ ನಡೆದ ಬಗ್ಗೆ ಈಗ ವರದಿಯಾಗಿದೆ. ಈ ಮಾಹಿತಿಯನ್ನು ಹಂಚಿಕೊಂಡಿರುವ ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ(CAAN), ಬೇಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಿದ ಏರ್ ಟ್ರಾಫಿಕ್ ಕಂಟ್ರೋಲರ್ ಇಲಾಖೆಯ ಮೂವರು ನೌಕರರನ್ನು ವಜಾ ಮಾಡಿದೆ.
ಶುಕ್ರವಾರ ಬೆಳಗ್ಗೆ ನೇಪಾಳ ಏರ್‌ಲೈನ್ಸ್‌ನ ಏರ್ ಬಸ್ ಎ-320 ಮಲೇಷ್ಯಾದ ಕೌಲಾಲಂಪುರದಿಂದ ಕಾಠ್ಮಂಡುಗೆ ಆಗಮಿಸುತ್ತಿತ್ತು. ಇದೇ ವೇಳೆ, ಏರ್ ಇಂಡಿಯಾ ವಿಮಾನವು ನವದೆಹಲಿಯಿಂದ ಕಾಠ್ಮಂಡುಗೆ ಬರುತ್ತಿತ್ತು. ಈ ಎರಡೂ ವಿಮಾನಗಳು ಆಕಾಶದಲ್ಲಿ ಸ್ವಲ್ಪದರಲ್ಲೇ ಡಿಕ್ಕಿಯಾಗುವುದು ತಪ್ಪಿದೆ.
ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಟ್ವೀಟ್
ಒಂದೇ ನಿರ್ದಿಷ್ಟ ಸ್ಥಳದಲ್ಲಿ ಏರ್ ಇಂಡಿಯಾ ವಿಮಾನವು 19,000 ಅಡಿಗಳಿಂದ ಕೆಳಗಿಳಿಯುತ್ತಿದ್ದರೆ, ನೇಪಾಳ ಏರ್‌ಲೈನ್ಸ್ ವಿಮಾನವು 15,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಜಗನ್ನಾಥ ನಿರೋಲಾ ಅವರು ಹೇಳಿದ್ದಾರೆ.
ಇದನ್ನೂ ಓದಿ: Nepal Plane Crash | ಪತಿಯಂತೆಯೇ ಕೊನೆಯುಸಿರೆಳೆದ ಪತ್ನಿ! ನೇಪಾಳದ ವಿಮಾನ ದುರಂತದಲ್ಲಿ ಮೃತ ಕೋ-ಪೈಲಟ್ ಅಂಜು ಕಥೆ
ಈ ಎರಡೂ ವಿಮಾನಗಳು ತೀರಾ ಹತ್ತಿರದಲ್ಲಿವೆ ಎಂಬುದನ್ನು ರೆಡಾರ್ ತೋರಿಸುತ್ತಿದ್ದಂತೆ ನೇಪಾಳ ಏರ್‌ಲೈನ್ಸ್ ತನ್ನ ವಿಮಾನವನ್ನು 7000 ಅಡಿಗೆ ಕೆಳಗಿಳಿಸಿತು. ಆ ಮೂಲಕ ಸಂಭಾವ್ಯ ವಿಮಾನ ಅವಘಡವನ್ನು ತಪ್ಪಿಸಿತು ಎಂದು ಅವರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ನೇಪಾಳ ವಿಮಾನಯಾನ ಸಚಿವಾಲಯವು ಮೂವರ ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಈ ಕುರಿತು ಏರ್ ಇಂಡಿಯಾ ಯಾವುದೇ ಮಾಹಿತಿಯನ್ನು ನೀಡಿಲ್ಲ.