ನವ ದೆಹಲಿ: ದುಬೈನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲೆಟ್ ಬಹುಮುಖ್ಯವಾದ ಸುರಕ್ಷತಾ ನಿಯಮವೊಂದನ್ನು ಉಲ್ಲಂಘಿಸುವ ಮೂಲಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಫೆಬ್ರವರಿ 27ರಂದು ದುಬೈನಿಂದ ಟೇಕ್ಆಫ್ ಆಗಿ ದೆಹಲಿ ಕಡೆಗೆ ಹೊರಟಿದ್ದ ಆ ವಿಮಾನದಲ್ಲಿ ಪೈಲೆಟ್ ಆಗಿದ್ದವನ ಸ್ನೇಹಿತೆಯೊಬ್ಬಳು ಪ್ರಯಾಣ ಮಾಡುತ್ತಿದ್ದಳು. ಅವಳಿಗೆ ಅನುಕೂಲ ಮಾಡಿಕೊಡಲು ಹೋಗಿ, ಪೈಲೆಟ್ ಸಂಕಷ್ಟಕ್ಕೆ ಸಿಲುಕಿದ್ದಾನೆ.
ವಿಮಾನ ಸಂಚಾರ ಶುರುವಾಗಿ ಕೆಲವೇ ಹೊತ್ತಾಗಿತ್ತು. ಆಗ ವಿಮಾನದ ಕ್ಯಾಬಿನ್ ಸಿಬ್ಬಂದಿ(ಗಗನಸಖಿ/ಪರಿಚಾರಕರು) ಒಂದಿಬ್ಬರನ್ನು ಕರೆದ ಪೈಲೆಟ್, ‘ನನ್ನ ಸ್ನೇಹಿತೆಯೊಬ್ಬಳು ವಿಮಾನದಲ್ಲಿ ಎಕಾನಮಿ ಕ್ಲಾಸ್ನ ಸೀಟ್ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಳೆ. ಆಕೆಗೆ ಬಿಜಿನೆಸ್ ಕ್ಲಾಸ್ನಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಿ’ ಎಂದು ಹೇಳಿದ್ದಾರೆ. ಪೈಲೆಟ್ ಹೇಳಿದ್ದಾರೆಂದು ಕ್ಯಾಬಿನ್ ಸಿಬ್ಬಂದಿ ಆ ಮಹಿಳೆಯನ್ನು ಬಿಜಿನೆಸ್ ಕ್ಲಾಸ್ನಲ್ಲಿ ಕೂರಿಸಲು ಮುಂದಾದರೂ, ಅಲ್ಲಿ ಸೀಟ್ ಖಾಲಿ ಇರಲಿಲ್ಲ. ಅದನ್ನು ಬಂದು ಪೈಲೆಟ್ ಬಳಿ ಅವರು ಹೇಳಿಕೊಂಡಿದ್ದಾರೆ. ಆ ಪೈಲೆಟ್ ಸುಮ್ಮನಿರದೆ ತನ್ನ ಸ್ನೇಹಿತೆಯನ್ನು ತಾನು ಕುಳಿತುಕೊಳ್ಳುವ ವಿಮಾನದ ಕಾಕ್ಪಿಟ್ಗೇ ಕರೆಸಿಕೊಂಡು ಜಂಪ್ ಸೀಟ್ನಲ್ಲಿ ಅಂದರೆ ತನ್ನ ಸೀಟ್ನ ಹಿಂಬದಿಯಲ್ಲೇ ಇರುವ ಸೀಟ್ನಲ್ಲಿಯೇ ಕೂರಿಸಿಕೊಂಡಿದ್ದ. ಇದರಿಂದ ಕಿರಿಕಿರಿಗೊಂಡಿದ್ದ ವಿಮಾನದ ಸಿಬ್ಬಂದಿ ಡಿಜಿಸಿಎಗೆ ದೂರು ಕೊಟ್ಟಿದ್ದರು.
ಇದನ್ನೂ ಓದಿ: Air India: ಕ್ಯಾಬಿನ್ ಸಿಬ್ಬಂದಿಗೆ ಪ್ರಯಾಣಿಕ ಹಲ್ಲೆ, ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿಗೆ ವಾಪಸ್
ವಿಮಾನ ಪರಿಚಾರಕಿಯೊಬ್ಬರು ದೂರು ನೀಡಿ ‘ಪೈಲೆಟ್ ನನ್ನನ್ನು ಮೊದಲು ಕರೆದು, ಅವರ ಸ್ನೇಹಿತೆಯನ್ನು ಕಾಕ್ಪಿಟ್ಗೆ ಕರೆದುಕೊಂಡು ಬರುವಂತೆ ಹೇಳಿದರು. ಅವರ ಮಾತು ಮೀರಲಾಗದೆ ಕರೆದೊಯ್ಯಲಾಯಿತು. ಅಷ್ಟಕ್ಕೂ ಬಿಡಲಿಲ್ಲ, ಆಕೆಗೆ ತಿಂಡಿ, ಮದ್ಯವನ್ನೆಲ್ಲ ಅಲ್ಲಿಯೇ ತಂದು ಕೊಡಲು ಹೇಳಿದರು. ಇದು ನನ್ನ ಸ್ನೇಹಿತೆಯ ಪಾಲಿಗೆ ಆರಾಮದಾಯಕವಾದ, ಲಿವಿಂಗ್ ರೂಮ್ನಂತೆ ಇರಬೇಕು ಎಂದರು. ಆಗ ನಾನು ಒಪ್ಪಲಿಲ್ಲ. ‘ಇಲ್ಲಿಗೆ ಅಲ್ಕೋಹಾಲ್ ನಾನು ಸರ್ವ್ ಮಾಡುವುದಿಲ್ಲ’ ಎಂದು ಹೇಳಿಬಿಟ್ಟೆ. ಅಷ್ಟಕ್ಕೇ ಪೈಲೆಟ್ ಸಿಟ್ಟಾದರು. ಅವರ ಮಾತಿನ ಧಾಟಿಯೇ ಬದಲಾಗಿಹೋಯಿತು. ಪದೇಪದೆ ಕರೆಯುವುದು, ವೃಥಾ ಏನಾದರೂ ಕೊಡು ಎಂದು ಹೇಳಲು ಶುರು ಮಾಡಿದರು.’ಎಂದು ವಿವರಿಸಿದ್ದಾರೆ.
ಕಾಕ್ಪಿಟ್ ಎಂಬುದು ವಿಮಾನದಲ್ಲಿ ಸೂಕ್ಷ್ಮ ಪ್ರದೇಶವಾಗಿದೆ. ವಿಮಾನ ಆಪರೇಟ್ ಮಾಡುವ ಸ್ಥಳವಾಗಿದ್ದು, ಪೈಲೆಟ್ಗಳು, ಕ್ಯಾಬಿನ್ ಸಿಬ್ಬಂದಿ, ಡಿಜಿಸಿಎ ಅಧಿಕಾರಿಗಳು ಮತ್ತು ಡಿಜಿಸಿಎಯಿಂದ ಅನುಮತಿ ಪಡೆದವರು, ಮೆಕ್ಯಾನಿಕ್ ಸಿಬ್ಬಂದಿಗೆ ಮಾತ್ರ ಇಲ್ಲಿ ಪ್ರವೇಶಿಸಲು ಅನುಮತಿಯಿದೆ. ಕಾಕ್ಪಿಟ್ನಲ್ಲಿ ಪ್ರಯಾಣಿಕರಿಗೆ ಪ್ರವೇಶ ಇಲ್ಲವೇ ಇಲ್ಲ. ಹೀಗಾಗಿ ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿದೆ. ಪೈಲೆಟ್ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದೆ.