Site icon Vistara News

Air India: ಎಮರ್ಜನ್ಸಿ ಲ್ಯಾಂಡಿಂಗ್‌ ಬಳಿಕ ವಿಮಾನ ಹಾರಿಸಲು ಒಲ್ಲೆ ಎಂದ ಪೈಲಟ್;‌ 350 ಜನಕ್ಕೆ ಪರದಾಟ

Air India Pilot Refuses To Fly

Air India Pilot Refuses to Fly Plane After Emergency Landing in Jaipur, 350 Passengers Stranded

ಜೈಪುರ: ಲಂಡನ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ (Air India) ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್‌ ಮಾಡಿದ ಬಳಿಕ ಮತ್ತೆ ವಿಮಾನ ಹಾರಿಸಲು ವಿಮಾನದ ಪೈಲಟ್‌ ನಿರಾಕರಿಸಿದ ಕಾರಣ ಸುಮಾರು 350 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡಿದರು.

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಎ-112 ವಿಮಾನವು ಲಂಡನ್‌ನಿಂದ ಹಾರಾಟ ಆರಂಭಿಸಿದ್ದ, ದೆಹಲಿ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ 4 ಗಂಟೆಗೆ ತಲುಪಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನವನ್ನು ಜೈಪುರದಲ್ಲಿ ಎಮರ್ಜನ್ಸಿ ಲ್ಯಾಂಡಿಂಗ್‌ ಮಾಡಲಾಗಿದೆ. ವಿಮಾನ ಲ್ಯಾಂಡ್‌ ಆದ ಬಳಿಕ ಮತ್ತೆ ಹಾರಾಟ ಆರಂಭಿಸಲು ಪೈಲಟ್‌ ನಿರಾಕರಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ವಿಮಾನ ಹಾರಾಟ ನಡೆಸಲು ಪೈಲಟ್‌ ನಿರಾಕರಿಸಿದ ಕಾರಣ ಸುಮಾರು 350 ಪ್ರಯಾಣಿಕರು ನಾಲ್ಕರಿಂದ ಐದು ಗಂಟೆ ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆದಿದ್ದಾರೆ. ಕಾದು ಕಾದು ಸುಸ್ತಾದ ಜನ ಕೊನೆಗೆ ವಿಧಿಯಿಲ್ಲದೆ ಬೇರೆ ಮಾರ್ಗದ ಮೂಲಕ ದೆಹಲಿ ತಲುಪಿದ್ದಾರೆ.

ಶಿಫ್ಟ್‌ ಮುಗಿದ ಕಾರಣ ಪೈಲಟ್‌ ನಕಾರ

ಜೈಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಎಮರ್ಜನ್ಸಿ ಲ್ಯಾಂಡಿಂಗ್‌ ಆದ ಎರಡು ಗಂಟೆಯ ನಂತರ ಮತ್ತೆ ವಿಮಾನ ಹಾರಾಟ ಆರಂಭಿಸಲು ದೆಹಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ (ATC) ಅನುಮತಿ ನೀಡಿದೆ. ಆದರೆ, ಕೆಲಸದ ಶಿಫ್ಟ್‌ ಮುಗಿದ ಕಾರಣ ಮತ್ತೆ ನಾನು ವಿಮಾನ ಹಾರಾಟ ಆರಂಭಿಸುವುದಿಲ್ಲ ಎಂದು ಪೈಲಟ್‌ ಹೇಳಿದ್ದಾರೆ. ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ: Air India : ಏರಿಕೆಯ ಬಳಿಕ ಏರ್‌ ಇಂಡಿಯಾ ಪೈಲಟ್‌ ಪಡೆಯುವ ಮಾಸಿಕ ಸಂಬಳ ಎಷ್ಟು?

ಎಮರ್ಜನ್ಸಿ ಲ್ಯಾಂಡಿಂಗ್‌ ಬಳಿಕ, ತಾಸುಗಟ್ಟಲೆ ಕಾದರೂ ಪೈಲಟ್‌ ವಿಮಾನ ಹಾರಾಟ ಆರಂಭಿಸಲು ನಿರಾಕರಿಸಿದ ಕಾರಣ ಪ್ರಯಾಣಿಕರು ಹಿಡಿಶಾಪ ಹಾಕಿದರು. ವೃತ್ತಿಪರತೆ ಇರುವವರು ಹೀಗೆ ವರ್ತಿಸುವುದಿಲ್ಲ ಎಂದೆಲ್ಲ ದೂರಿದರು. ಇದರಿಂದಾಗಿ, ಒಂದಷ್ಟು ಜನ ಬೇರೆ ವಿಮಾನ ಹತ್ತಿ ದೆಹಲಿ ತಲುಪಿದರೆ, ಮತ್ತೊಂದಿಷ್ಟು ಬೇರೊಬ್ಬ ಪೈಲಟ್‌ ಬರುವತನಕ ಕಾದು, ಅದೇ ವಿಮಾನದಲ್ಲಿ ರಾಷ್ಟ್ರ ರಾಜಧಾನಿಗೆ ತೆರಳಿದರು.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version