Site icon Vistara News

Air India Deal: 250 ವಿಮಾನ ಖರೀದಿಗೆ ಏರ್‌ ಇಂಡಿಯಾ ಒಪ್ಪಂದ, ಐತಿಹಾಸಿಕ ಎಂದ ಮೋದಿ, ಬೋಯಿಂಗ್‌ ಜತೆ ಮತ್ತೊಂದು ಡೀಲ್‌

air india

ನವದೆಹಲಿ: ಫ್ರಾನ್ಸ್‌ನ ವಿಮಾನ ತಯಾರಿಕೆ ಸಂಸ್ಥೆ ಏರ್‌ಬಸ್‌ನಿಂದ ೨೫೦ ವಿಮಾನಗಳ ಖರೀದಿಗೆ ಏರ್‌ ಇಂಡಿಯಾ ಸಂಸ್ಥೆಯು ಮಹತ್ವದ ಒಪ್ಪಂದಕ್ಕೆ (Air India Deal) ಸಹಿ ಹಾಕಿದೆ. ಇದು ಜಗತ್ತಿನಲ್ಲೇ ಬೃಹತ್‌ ವಿಮಾನಯಾನ ಒಪ್ಪಂದ ಎಂದೇ ಹೇಳಲಾಗುತ್ತಿದ್ದು, “ಐತಿಹಾಸಿಕ ಒಪ್ಪಂದ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಟಾಟಾ ಸನ್ಸ್‌ ಅಧ್ಯಕ್ಷ ಎನ್.ಚಂದ್ರಶೇಖರನ್‌ ಅವರು ಒಪ್ಪಂದದ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ.

ಟಾಟಾ ಗ್ರೂಪ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌, ರತನ್‌ ಟಾಟಾ, ಟಾಟಾ ಸನ್ಸ್‌ ಅಧ್ಯಕ್ಷ ಎನ್‌.ಚಂದ್ರಶೇಖರನ್‌, ಕೇಂದ್ರ ಸಚಿವರಾದ ಪಿಯೂಷ್‌ ಗೋಯಲ್‌ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿದರು. ಇದೇ ವೇಳೆ, ಮ್ಯಾಕ್ರನ್‌ ಅವರು ವೈಮಾನಿಕ ಒಪ್ಪಂದ ಹಾಗೂ ಭಾರತದ ಜತೆಗಿನ ಸಂಬಂಧವನ್ನು ಶ್ಲಾಘಿಸಿದರು. ನರೇಂದ್ರ ಮೋದಿ ಅವರೂ, “ಇದು ಐತಿಹಾಸಿಕ ಒಪ್ಪಂದವಾಗಿದ್ದು, ಉಭಯ ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಒಪ್ಪಂದವು ಏಣಿಯಾಗಿದೆ” ಎಂದು ಬಣ್ಣಿಸಿದರು.

ಏರ್‌ ಇಂಡಿಯಾ ಒಪ್ಪಂದದ ಪ್ರಕಾರ ಏರ್‌ಬಸ್‌ನಿಂದ ೧೪೦ ಎ೩೨೦, ೭೦ ಎ೩೨೧ ಹಾಗೂ ೪೦ ಎ೩೫೦ (ವೈಡ್‌ ಬಾಡಿ ವಿಮಾನ ಎಂದೇ ಖ್ಯಾತಿ) ಸೇರಿ ಒಟ್ಟು ೨೫೦ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಕಳೆದ ಕೆಲ ತಿಂಗಳಿಂದ ಒಪ್ಪಂದದ ಕುರಿತು ವರದಿಗಳು ಕೇಳಿಬಂದಿದ್ದವು. ಕೇಂದ್ರ ಸರ್ಕಾರದಿಂದ ಏರ್‌ ಇಂಡಿಯಾವನ್ನು ಟಾಟಾ ಗ್ರೂಪ್‌ ಖರೀದಿಸಿದ ಒಂದು ವರ್ಷದಲ್ಲಿಯೇ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ವಿಮಾನಯಾನ ಸೇವೆಯು ಮತ್ತಷ್ಟು ಉತ್ಕೃಷ್ಟವಾಗಲಿದೆ ಎಂದೇ ಹೇಳಲಾಗುತ್ತಿದೆ.

ಅಮೆರಿಕದ ಬೋಯಿಂಗ್‌ನಿಂದ 220 ವಿಮಾನ ಖರೀದಿ

ಫ್ರಾನ್ಸ್‌ನ ಏರ್‌ ಬಸ್‌ ಮಾತ್ರವಲ್ಲ, ಅಮೆರಿಕದ ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ನಿಂದಲೂ ಏರ್‌ ಇಂಡಿಯಾ ೨೨೦ ವಿಮಾನಗಳನ್ನು ಖರೀದಿಸಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೇ ಈ ಕುರಿತು ಘೋಷಣೆ ಮಾಡಿದ್ದು, “೨೨೦ ಬೋಯಿಂಗ್‌ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ” ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಎರಡೂ ಒಪ್ಪಂದ ಸೇರಿ ಒಟ್ಟು ೪೭೦ ವಿಮಾನಗಳನ್ನು ಹಂತ ಹಂತವಾಗಿ ಏರ್‌ ಇಂಡಿಯಾ ಖರೀದಿಸಿ, ಜನರ ಪ್ರಯಾಣಕ್ಕೆ ನೀಡಲಿದೆ. ಇದಕ್ಕಾಗಿ ಸುಮಾರು ೫.೬ ಲಕ್ಷ ಕೋಟಿ ರೂ. ವ್ಯಯಿಸುತ್ತಿದೆ ಎಂದು ತಿಳಿದುಬಂದಿದೆ.

ಒಪ್ಪಂದ ಏಕೆ?

ಕೇಂದ್ರ ಸರ್ಕಾರದಿಂದ ಏರ್‌ ಇಂಡಿಯಾವನ್ನು ಟಾಟಾ ಗ್ರೂಪ್‌ ವಶಪಡಿಸಿಕೊಂಡು ಒಂದು ವರ್ಷವಾಗಿದೆ. ಟಾಟಾ ಗ್ರೂಪ್‌ ಏರ್‌ ಇಂಡಿಯಾವನ್ನು ಖರೀದಿಸಿದ ಬಳಿಕ ದೈನಂದಿನ ಸರಾಸರಿ ಆದಾಯ ದ್ವಿಗುಣಗೊಂಡಿದೆ ಎಂದು ಸಂಸ್ಥೆಯೇ ತಿಳಿಸಿದೆ. ಇದರ ಬೆನ್ನಲ್ಲೇ, ಬೃಹತ್‌ ಒಪ್ಪಂದ ಮಾಡಿಕೊಂಡಿದೆ. ವಿಮಾನಗಳ ಸೇವೆಯನ್ನು ಮತ್ತಷ್ಟು ವಿಸ್ತರಿಸುವುದು ಏರ್‌ ಇಂಡಿಯಾದ ಗುರಿಯಾಗಿದೆ. ಇದಕ್ಕಾಗಿ, ಬೃಹತ್‌, ಮಧ್ಯಮ ಹಾಗೂ ಸಣ್ಣ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಮುಂದಾಗಿದೆ. ಅದರಲ್ಲೂ, ಅತ್ಯಾಧುನಿಕ ವಿಮಾನಗಳನ್ನು ಖರೀದಿಸಿ, ಪ್ರಯಾಣಿಕರಿಗೆ ಅತ್ಯುನ್ನತ ಸೇವೆ ಒದಗಿಸುವ ದಿಸೆಯಲ್ಲಿ ವಿಶ್ವದ ಬೃಹತ್‌ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ: Air India Alcohol Policy: ಡಿಜಿಸಿಎ ಭಾರಿ ದಂಡದ ಬೆನ್ನಲ್ಲೇ ಆಲ್ಕೋಹಾಲ್‌ ನೀತಿ ಬದಲಿಸಿದ ಏರ್‌ ಇಂಡಿಯಾ, ಏನಿದು?

Exit mobile version