ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ (Delhi Air Pollution) ಪ್ರತಿ ವರ್ಷದಂತೆ ಈ ವರ್ಷವೂ ಮಿತಿಮೀರುತ್ತಿದೆ. ಗಾಳಿಯ ಮಟ್ಟ ಅಪಾಯಕಾರಿ ತಲುಪಿರುವುದರಿಂದ ಜನ ಮನೆಯಿಂದಲೂ ಹೊರಬರಲು ಕಷ್ಟಪಡುವಂತಾಗಿದೆ. ಹಾಗಾಗಿ, ನವೆಂಬರ್ 8ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ದೆಹಲಿ ಏಮ್ಸ್ ಮಾಜಿ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ರಾಜಧಾನಿಯ ಗಾಳಿಯು ಸಿಗರೇಟಿನ ಹೊಗೆಗಿಂತ ಅಪಾಯಕಾರಿ ಎಂದು ಹೇಳಿದ್ದಾರೆ.
“ದೆಹಲಿಯ ಗಾಳಿಯು ಅಪಾಯಕಾರಿ ಹಂತ ತಲುಪಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ಸಿಗರೇಟ್ ಹೊಗೆಗಿಂತ ಹೆಚ್ಚು ಪರಿಣಾಮ ಬೀರುತ್ತಿದೆ. ತಂಬಾಕಿನ ಹೊಗೆಯಷ್ಟೇ ಇದು ಅಪಾಯಕಾರಿಯಾಗಿದೆ. ಜನ ಗಾಳಿ ಸೇವಿಸುವುದು ಎಂದರೆ ಸಿಗರೇಟ್ ಸೇದಿದಂತೆಯೇ ಆಗುತ್ತಿದೆ” ಎಂದು ಹೇಳಿದ್ದಾರೆ.
ವಿಶ್ವದ ಪ್ರಮುಖ ಮಾಲಿನ್ಯಪೀಡಿತ ನಗರಗಳಲ್ಲಿ ಭಾರತದ ದೆಹಲಿ ಸೇರಿ ಹಲವು ನಗರಗಳು ಸ್ಥಾನ ಪಡೆದಿವೆ. ಸದ್ಯ ದೆಹಲಿ ಗಾಳಿ ಗುಣಮಟ್ಟದ ಸೂಚ್ಯಂಕದಲ್ಲಿ (ಎಕ್ಯೂಐ) 447 ದಾಖಲಾಗಿದೆ. ಒಂದು ವರದಿ ಪ್ರಕಾರ ದೇಶದಲ್ಲಿ ವರ್ಷಕ್ಕೆ ವಾಯುಮಾಲಿನ್ಯದಿಂದಾಗಿ 12 ಲಕ್ಷಕ್ಕೂ ಅಧಿಕ ಜನ ಮೃತಪಡುತ್ತಾರೆ. ಹೀಗಿದ್ದರೂ, ದೆಹಲಿ ಮಾಲಿನ್ಯ ವಿಚಾರದಲ್ಲಿ ಬಿಜೆಪಿ ಹಾಗೂ ಆಪ್ ಮಧ್ಯೆ ರಾಜಕೀಯ ಮೇಲಾಟ ನಡೆಯುತ್ತಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ (NCR) ಕೃಷಿ ತ್ಯಾಜ್ಯ ಸುಡುವ ಕುರಿತು ಹೊಸ ಮಾರ್ಗಸೂಚಿ ಹೊರಡಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದು, ನವೆಂಬರ್ 10ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಇದನ್ನೂ ಓದಿ | ವಾಯು ಮಾಲಿನ್ಯ | ನಿಮ್ಮ ಚರ್ಮ, ಕೂದಲನ್ನು ರಕ್ಷಿಸಿಕೊಳ್ಳಲು 6 ದಾರಿ