ನವದೆಹಲಿ: ವಿಮಾನಯಾನ ಸಂಚಾರಿಗಳಿಗೆ ಗುಡ್‌ನ್ಯೂಸ್. ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (Bureau of Civil Aviation Security) ಹೊಸದೊಂದು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ವಿಮಾನ ದೀರ್ಘ ಕಾಲದ ವಿಳಂಬ ಹೊಂದಿದ್ದರೆ ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣದ ಡಿಪಾರ್ಚರ್ ಗೇಟ್ (Airport departure gate) ಮೂಲಕ ತೆರಳಬಹುದಾಗಿದೆ. ಹೆಚ್ಚುತ್ತಿರುವ ವಿಮಾನಗಳ ವಿಳಂಬ ಮತ್ತು ದಟ್ಟಣೆಯ ಪ್ರಕರಣಗಳ ಹಿನ್ನೆಲೆಯಲ್ಲಿ ಈ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ (Airport).
ಪ್ರಯಾಣಿಕರಿಗೆ ಎದುರಾಗುವ ಅನಾನುಕೂಲತೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಎಎಸ್ ಮಹಾನಿರ್ದೇಶಕ ಜುಲ್ಫಿಕರ್ ಹಸನ್ ಹೇಳಿದ್ದಾರೆ. ʼʼಹೆಚ್ಚುತ್ತಿರುವ ವಿಮಾನಗಳ ದಟ್ಟಣೆ ಮತ್ತು ವಿಮಾನ ವಿಳಂಬದ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಲಾಗಿದೆ. ಪ್ರಯಾಣಿಕರು ದೀರ್ಘ ಕಾಲದವರೆಗೆ ವಿಮಾನದೊಳಗೆ ಕಳೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದೀರ್ಘ ವಿಳಂಬ ಅಥವಾ ತುರ್ತು ಸಂದರ್ಭಗಳಲ್ಲಿ ಡಿಪಾರ್ಚರ್ ಗೇಟ್ ಮೂಲಕ ತೆರಳಲು ಅನುವು ಮಾಡಿಕೊಡುವ ಮೂಲಕ ಪ್ರಯಾಣಿಕರಿಗೆ ನೆರವು ಒದಗಿಸುತ್ತಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ.
ʼʼಮಾರ್ಚ್ 30ರಿಂದಲೇ ಈ ಆದೇಶ ಜಾರಿಗೆ ಬಂದಿದೆ. ಈ ಕುರಿತು ವಿಮಾನ ನಿಲ್ದಾಣ ನಿರ್ವಾಹಕರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಆದೇಶ ಜಾರಿಗೆ ತರಲು ಸ್ಕ್ರೀನಿಂಗ್ ಸೌಲಭ್ಯಗಳು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಲು ನಿರ್ದೇಶನ ನೀಡಲಾಗಿದೆ. ಆದಾಗ್ಯೂ ಪ್ರಯಾಣಿಕರನ್ನು ಇಳಿಸುವ ನಿರ್ಧಾರವು ಅಂತಿಮವಾಗಿ ವಿಮಾನಯಾನ ಸಂಸ್ಥೆಗಳು ಮತ್ತು ಸಂಬಂಧಿತ ಭದ್ರತಾ ಸಂಸ್ಥೆಗಳಿಗೆ ಬಿಟ್ಟಿದ್ದುʼʼ ಎಂದು ಜುಲ್ಫಿಕರ್ ಹಸನ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿನ ದಟ್ಟಣೆ ಸಮಸ್ಯೆಗಳನ್ನು ಪರಿಹರಿಸಲು ಬಿಸಿಎಎಸ್ ಕಾರ್ಯನಿರ್ವಹಿಸುತ್ತಿದೆ. ದಟ್ಟಣೆಯನ್ನು ನಿಯಂತ್ರಿಸಲು, ಪ್ರಯಾಣಿಕರು ಎದುರಿಸುವ ಸಮಸ್ಯೆ ನಿಯಂತ್ರಿಸಲು ಸ್ಮಾರ್ಟ್ ಭದ್ರತಾ ಯೋಜನೆಗಳ ಅನುಷ್ಠಾನವನ್ನು ಹಸನ್ ಒತ್ತಿ ಹೇಳಿದ್ದಾರೆ. ಬಿಸಿಎಎಸ್ ಬೆಂಗಳೂರು ವಿಮಾನ ನಿಲ್ದಾಣ ಸೇರಿ ವಿವಿಧೆಡೆಗಳಲ್ಲಿ ಪೂರ್ಣ-ದೇಹದ ಸ್ಕ್ಯಾನರ್‌ಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಜತೆಗೆ ವಿಮಾನ ಇಳಿದ ನಂತರ ಸಕಾಲದಲ್ಲಿ ಲಗೇಜ್ ಸಂಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಏರುವ ಡಾಮರು ರಸ್ತೆಯ ಮೇಲೆ ಪ್ರಯಾಣಿಕರು ಕುಳಿತು ಆಹಾರ ಸೇವಿಸುವಂತಹ ಪರಿಸ್ಥಿತಿ ನಿರ್ಮಿಸಿದ ಆರೋಪದ ಮೇರೆಗೆ ಇಂಡಿಗೋ ವಿಮಾನ ಯಾನ ಕಂಪೆನಿಗೆ 1.2 ಕೋಟಿ ರೂ. ದಂಡ ವಿಧಿಸಲಾಗಿತ್ತು. ಮಾತ್ರವಲ್ಲ ಪ್ರಯಾಣಿಕರಿಗೆ ಅನಾನುಕೂಲ ಕಲ್ಪಿಸಿದ ಕಾರಣಕ್ಕಾಗಿ ಮುಂಬೈ ವಿಮಾನ ನಿಲ್ದಾಣಕ್ಕೂ 30 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಹೀಗಾಗಿ ಈ ನಿರ್ದೇಶನ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: Air India: ನಿಯಮ ಉಲ್ಲಂಘಿಸಿದ ಏರ್ ಇಂಡಿಯಾಕ್ಕೆ ಬಿತ್ತು ಭಾರೀ ದಂಡ
ಪೈಲಟ್‌ಗೆ ಹೊಡೆದ ಪ್ರಯಾಣಿಕ
ವಿಮಾನ ವಿಳಂಬವಾದ ಹಿನ್ನೆಲೆಯಲ್ಲಿ ಪ್ರಯಾಣಿಕನೊಬ್ಬ ಪೈಲಟ್ ಮೇಲೆ ಹಲ್ಲೆ ನಡೆಸಿದ ಘಟನೆ ಜನವರಿ 14ರಂದು ನಡೆದಿತ್ತು. ದಟ್ಟ ಮಂಜಿನಿಂದಾಗಿ ವಿಮಾನದ ಹಾರಾಟ ವಿಳಂಬವಾಗಿತ್ತು. ಸುಮಾರು 13 ತಾಸು ಪ್ರಯಾಣಿಕರು ವಿಮಾನದಲ್ಲಿಯೇ ಕಾದು ಕುಳಿತಿದ್ದರು. ದೆಹಲಿಯಿಂದ ಗೋವಾಗೆ ಹೊರಡುವ ಈ ವಿಮಾನದ ಪೈಲಟ್ ಎಲ್ಲ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿಮಾನ ಹಾರಾಟ ವಿಳಂಬವಾಗಿರುವ ಕುರಿತು ಹೇಳುತ್ತಿದ್ದರು. ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪೈಲಟ್ ಮೇಲೆ ಎರಗಿ ಹಲ್ಲೆ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಹೊಸ ಆದೇಶ ಹೊರಡಿಸಿದ್ದ ಡಿಜಿಸಿಎ ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಅಂತಹ ವಿಮಾನಗಳ ಪ್ರಯಾಣ ರದ್ದುಗೊಳಿಸಬೇಕು ಎಂದು ಸೂಚಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ