ನವದೆಹಲಿ: ಸೀನಿಯರ್ ಐಪಿಎಸ್ ಪೊಲೀಸ್ ಅಧಿಕಾರಿ ಅಜಯ್ ಭಟ್ನಾಗರ್ (IPS officer Ajay Bhatnagar) ಅವರನ್ನು ಕೇಂದ್ರ ತನಿಖಾ ದಳ (CBI)ದ ವಿಶೇಷ ನಿರ್ದೇಶಕರನ್ನಾಗಿ (Special Director of CBI) ನೇಮಕ ಮಾಡಲಾಗಿದೆ. ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ.
ಅಜಯ್ ಭಟ್ನಾಗರ್ ಅವರು 1989ನೇ ಬ್ಯಾಚಿನ ಜಾರ್ಖಂಡ್ ಕೆಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಅವರು ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಅವರ ನಿವೃತ್ತಿಯವರೆಗೂ ಈ ಹುದ್ದೆಯಲ್ಲಿ ಮುಂದವರಿಯಲಿದ್ದಾರೆ. ಅಂದರೆ, 2024 ನವೆಂಬರ್ 20ರವರೆಗೂ ಅಜಯ್ ಭಟ್ನಾಗರ್ ಅವರು ಸಿಬಿಐನ ವಿಶೇಷ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಸಿಬಿಐನ ಜಂಟಿ ನಿರ್ದೇಶಕರಾಗಿದ್ದ ಅನುರಾಗ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಗಿದೆ. 2023 ಜುಲೈ 24 ರವರೆಗೆ ಅಂದರೆ ಅವರ ಏಳು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವನ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹಾಗೆಯೇ, 1994ರ ಬ್ಯಾಚಿನ್ ಗುಜರಾತ್ ಕೆಡರ್ ಅಧಿಕಾರಿ ಮನೋಜ್ ಶಶಿಧರ್ ಅವರನ್ನು ಸಿಬಿಐನ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇವರ ಅಧಿಕಾರವಧಿ ಮೂರು ವರ್ಷಗಳವರೆಗೆ ಇರಲಿದೆ. ಸದ್ಯ ಅವರು ಸಿಬಿಐನ ಜಂಟಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
ಮೇ ತಿಂಗಳಲ್ಲಿ ಹೊಸ ನಿರ್ದೇಶಕ ನೇಮಕ
ಕರ್ನಾಟಕ ರಾಜ್ಯ ಪೊಲೀಸ್ ಮಾಜಿ ಮಹಾನಿರ್ದೇಶಕ ಪ್ರವೀಣ್ ಸೂದ್ (Praveen Sood) ಅವರು ಕೇಂದ್ರೀಯ ತನಿಖಾ ದಳದ (CBI) ನೂತನ ನಿರ್ದೇಶಕರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. 1986ರ ಬ್ಯಾಚ್, ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಸಿಬಿಐನ 34ನೇ ನಿರ್ದೇಶಕರಾಗಿದ್ದಾರೆ. ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Praveen Sood: ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ ಪದಗ್ರಹಣ
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮರುದಿನ ಅಂದರೆ, ಮೇ 14ರಂದು ಪ್ರವೀಣ್ ಸೂದ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಸದ್ಯ, ದೆಹಲಿ ಅಬಕಾರಿ ನೀತಿ ಅಕ್ರಮ ಪ್ರಕರಣ ಸೇರಿ ಸಿಬಿಐ ಹಲವು ಸೂಕ್ಷ್ಮ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.