ನವದೆಹಲಿ: ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತಿಯಾಗಿರುವ, ಪಾಕಿಸ್ತಾನದ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ವಾಯುದಾಳಿ ಸೇರಿ ಹಲವು ಕಾರ್ಯಾಚರಣೆಗಳ ಸೂತ್ರಧಾರಿಯಾಗಿರುವ, ದೇಶದ ಟ್ರಬಲ್ ಶೂಟರ್ ಎಂದೇ ಹೆಸರು ಗಳಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) ಅಜಿತ್ ದೋವಲ್ (Ajit Doval) ಅವರನ್ನು ಕೇಂದ್ರ ಸರ್ಕಾರವು (Central Government) ಮೂರನೇ ಅವಧಿಗೂ ಸಲೆಹೆಗಾರರನ್ನಾಗಿ ನೇಮಿಸಿದೆ. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿಯಾಗಿ ಪಿ.ಕೆ.ಮಿಶ್ರಾ (PK Mishra) ಅವರೇ ಮುಂದುವರಿಯಲಿದೆ. ಇವರ ನೇಮಕದ ಕುರಿತು ಕೂಡ ಸರ್ಕಾರ ಆದೇಶ ಹೊರಡಿಸಿದೆ.
ಅಜಿತ್ ದೋವಲ್ ಅವರನ್ನು ಮೂರನೇ ಅವಧಿಗೆ ನೇಮಿಸಿರುವ ಕುರಿತು ಸಂಪುಟದ ನೇಮಕಾತಿ ಸಮಿತಿಯು ಜೂನ್ 10ರಂದೇ ಆದೇಶ ಹೊರಡಿಸಿದೆ. ನೂತನ ಆದೇಶದ ಪ್ರಕಾರ, ಅಜಿತ್ ದೋವಲ್ ಅವರು ನರೇಂದ್ರ ಮೋದಿ ಅವರು ಪ್ರಧಾನಿಯಾಗಿರುವವರೆಗೆ ಅಥವಾ ಮುಂದಿನ ಆದೇಶದವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಇರಲಿದ್ದಾರೆ. ಇದೇ ನಿಯಮವು ಪಿ.ಕೆ.ಮಿಶ್ರಾ ಅವರಿಗೂ ಅನ್ವಯವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
Ajit Doval appointed as National Security Advisor for a third time, appointment co-terminus with PM Modi pic.twitter.com/TTLRotwQbB
— ANI (@ANI) June 13, 2024
ಅಜಿತ್ ದೋವಲ್ ಅವರು 1968ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕೇಂದ್ರ ಸರ್ಕಾರದ ಮಿಲಿಟರಿ, ಇಂಟಲಿಜೆನ್ಸ್ ಸೇರಿ ಹಲವು ವಿಭಾಗಗಳಲ್ಲಿ ಮಹತ್ವದ ಸಲಹೆ-ಸೂಚನೆ ನೀಡುತ್ತಾರೆ. ಇನ್ನು ಡಾ.ಪಿ.ಕೆ.ಮಿಶ್ರಾ ಅವರು 1972ರ ಬ್ಯಾಚ್ ಅಧಿಕಾರಿಯಾಗಿದ್ದು, ಪಿಎಂಒದ ಪ್ರಮುಖ ನೇಮಕಾತಿಗಳ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಆಡಳಿತಾತ್ಮಕ ವಿಚಾರಗಳ ಹೊಣೆಯೂ ಇವರದ್ದೇ ಆಗಿದೆ.
ಪಿಎಫ್‌ಐ ನಿಷೇಧದ ಹಿಂದೆಯೂ ಅಜಿತ್ ದೋವಲ್ ಅವರ ಪಾತ್ರ ದೊಡ್ಡದಿದೆ. ಅಜಿತ್ ದೋವಲ್ ಅವರು 2022ರಲ್ಲಿ ಎನ್‌ಐಎ ದಾಳಿಗೂ ಐದು ದಿನದ ಮೊದಲೇ ಅಂದರೆ, ಸೆಪ್ಟೆಂಬರ್ 17ರಂದು ಪ್ರಮುಖ ಮುಸ್ಲಿಂ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ್ದರು. ಎನ್‌ಐಎ, ಇ.ಡಿ, ರಾಜ್ಯ ಪೊಲೀಸರು ಸೆ.22ರಂದು ನಡೆಸುವ ದಾಳಿ, ಪಿಎಫ್‌ಐ ವಿರುದ್ಧ ಕ್ರಮ, ಇದರ ಕುರಿತು ಮುಸ್ಲಿಂ ಸಂಘಟನೆಗಳ ಮುಖಂಡರ ಅಭಿಪ್ರಾಯವೇನು ಎಂಬುದನ್ನು ಸಂಗ್ರಹಿಸಿಯೇ ದಾಳಿ, ನಿಷೇಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ, ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ವೇಳೆ 3,600 ಕೋಟಿ ರೂ. ವಂಚನೆ ಪ್ರಕರಣದ ಪ್ರಮುಖ ಆರೋಪಿ ಕ್ರಿಶ್ಟಿಯನ್ ಮೈಕೆಲ್‌ನನ್ನು ಭಾರತಕ್ಕೆ ಕರೆತರುವುದು, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಪ್ರಮುಖ ತೀರ್ಮಾನಗಳ ಹಿಂದೆ ಅಜಿತ್ ದೋವಲ್ ಅವರು ಇದ್ದಾರೆ.
ಇದನ್ನೂ ಓದಿ: NSA Ajit Doval: ಅಜಿತ್ ದೋವಲ್ ಲಂಡನ್ ಭೇಟಿ: ಖಲಿಸ್ತಾನ್, ಬಿಬಿಸಿ, ಭಯೋತ್ಪಾದನೆ ವಿಚಾರದಿಂದಾಗಿ ಈ ಬಾರಿ ಮಾತುಕತೆ ಕಠಿಣ