Site icon Vistara News

NCP Crisis: ದಿಢೀರ್ ಶರದ್ ಪವಾರ್ ಭೇಟಿ ಮಾಡಿದ ಅಜಿತ್ ಬಣ! ವಿಷಾದ ವ್ಯಕ್ತಪಡಿಸಿದ್ರಾ?

Sharad Pawar and Ajit Pawar

ಮುಂಬೈ, ಮಹಾರಾಷ್ಟ್ರ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಎನ್‌ಸಿಪಿಯ ಬಂಡಾಯ ನಾಯಕರು, ಶಾಸಕರು ಪಕ್ಷದ ಪರಮೋಚ್ಚ ನಾಯಕ ಶರದ್ ಪವಾರ್ (Sharad Pawar) ಅವರನ್ನು ಮುಂಬೈನಲ್ಲಿ (Mumbai) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಅಜಿತ್ ಪವಾರ್(DCM Ajit Pawar), ಶರದ್ ಪವಾರ್ ಅವರ ನಿಕಟವರ್ತಿಯಾಗಿದ್ದ ಪ್ರಫುಲ್ ಪಟೇಲ್ (Praful Patel) ಹಾಗೂ ಹಲವರು ಈ ವೇಳೆ ಹಾಜರಿದ್ದರು. ಭೇಟಿ ಸಂದರ್ಭದಲ್ಲಿ ಅಜಿತ್ ಹಾಗೂ ಅವರ ಬೆಂಬಲಿಗ ಶಾಸಕರು ಹಾಗೂ ನಾಯಕರಿಗೆ ಶರದ್ ಪವಾರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಶರದ್ ಪವಾರ್ ಬಣದ ಎನ್‌ಸಿಪಿ (NCP) ನಾಯಕ ಜಯಂತ್ ಪಾಟೀಲ್ (Jayant Patil) ಮಾತ್ರ, ಈ ಬಿಕ್ಕಟ್ಟಿನಿಂದ ಪಾರು ಮಾಡುವಂತೆ ಅಜಿತ್ ಬಣದವರು ಕೇಳಿಕೊಂಡರು ಎಂದು ಹೇಳಿದ್ದಾರೆ(NCP Crisis).

ಮುಂಬೈನ ಮಂತ್ರಾಲಯದ ಸಮೀಪದಲ್ಲಿರುವ ವೈ ಬಿ ಚವಾಣ್ ಸೆಂಟರ್‌ನಲ್ಲಿದ್ದ ಶರದ್ ಪವಾರ್ ಅವರನ್ನು ಡಿಸಿಎಂ ಅಜಿತ್ ಪವಾರ್, ಹಿರಿಯ ನಾಯಕ ಪ್ರಫುಲ್ ಪಟೇಲ್, ಸಚಿವರಾದ ದಿಲಿಪ್ ವಾಲ್ಸೆ ಪಾಟೀಲ್, ಹಸನ್ ಮಶ್ರೀಫ್, ಛಗನ್ ಬುಜಬಲ್, ಧನಂಜಯ್ ಮುಂಡೆ, ಅದಿತಿ ತಟಕರೆ, ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರ ಭೇಟಿ ಮಾಡಿದರು.

ಬಳಿಕ ಮಾತನಾಡಿದ ಪ್ರಫುಲ್ ಪಟೇಲ್ ಅವರು, ನಮಗೆ ದೇವರ ಸಮಾನರಾಗಿರುವ ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ಬಂದಿದ್ದೇವೆ. ಎನ್‌ಸಿಪಿ ಒಂದಾಗಿರಬೇಕು ಎಂದು ನಾವು ಬಯಸುತ್ತಿದ್ದೇವೆ. ಹಾಗಾಗಿ, ನಾವು ವಿನಂತಿಯನ್ನು ಪರಿಗಣಿಸಿ, ನಮಗೆ ಮಾರ್ಗದರ್ಶನ ನೀಡಬೇಕು ಎಂದು ಕೇಳಿಕೊಂಡೆವು. ಆದರೆ, ಅವರು ನಮ್ಮ ಮಾತುಗಳನ್ನು ಕೇಳಿದರಷ್ಟೇ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: NCP Crisis: ಎನ್‌ಸಿಪಿ ಮುಖ್ಯಸ್ಥ ಹುದ್ದೆಯಿಂದ ಶರದ್ ಪವಾರ್‌ರನ್ನೇ ಕಿತ್ತು ಹಾಕಿದ ಬಂಡಾಯ ನಾಯಕ ಅಜಿತ್!

ನಾವು ಇಲ್ಲಿಗೆ ಅವರಿಗೆ ತಿಳಿಸದೆಯೇ ಬಂದಿದ್ದೇವೆ. ಅವರು ಕಚೇರಿಯಲ್ಲಿದ್ದಾರೆಂದು ತಿಳಿದ ತಕ್ಷಣವೇ ನಾವು ಇಲ್ಲಿಗೆ ಬಂದೆವು. ಅವರ ಆಶೀರ್ವಾದ ಕೋರಿದೆವು ಎಂದು ಪ್ರಫುಲ್ ಪಟೇಲ್ ಅವರು ಹೇಳಿದರು. ಅಜಿತ್ ಪವಾರ್ ಅವರ ತಂಡ ಶರದ್ ಪವಾರ್ ಅವರನ್ನು ಮೀಟ್ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ, ಎನ್‌ಸಿಪಿಯ ರಾಜ್ಯ ಅಧ್ಯಕ್ಷ ಜಯಂತ್ ಪಾಟೀಲ್, ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಅವರು ವೈ ಬಿ ಚವಾಣ್ ಸೆಂಟರ್ ತಲುಪಿದರು.

ಬಳಿಕ ಮಾತನಾಡಿದ ಶರದ್ ಪವಾರ್ ಬಣದ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರು, ಶರದ್ ಪವಾರ್ ಭೇಟಿಯ ವೇಳೆ ಅಜಿತ್ ಪವಾರ್ ಅವರ ಗುಂಪು ವಿಷಾದ ವ್ಯಕ್ತಪಡಿಸಿತು. ಪಕ್ಷದೊಳಗಿನ ಈಗಿನ ಬಿಕ್ಕಟ್ಟನ್ನು ಶಮನಗೊಳಿಸುವ ಮಾರ್ಗವನ್ನು ಶೋಧಿಸುವಂತೆ ಶರದ್ ಪವಾರ್ ಅವರಿಗೆ ಮನವಿ ಮಾಡಿಕೊಂಡಿತು ಎಂದು ತಿಳಿಸಿದರು. ಶರದ್ ಪವಾರ್ ನೇತೃತ್ವದ ಎನ್‌ಸಿಪಿಯಲ್ಲಿ 19 ಶಾಸಕರಿದ್ದಾರೆ. ಒಂದು ವೇಳೆ, ಅವರು(ಬಂಡಾಯಗಾರರು) ವಾಪಸ್ ಪಕ್ಷಕ್ಕೆ ಬರುವ ಹಾಗಿದ್ದರೆ, ದ್ವಾರ ತೆರೆದಿರುತ್ತದೆ ಎಂದು ಹೇಳಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version