Site icon Vistara News

Real NCP: ಅಜಿತ್‌ ಪವಾರ್‌ ಬಣದ್ದೇ ನಿಜವಾದ ಎನ್‌ಸಿಪಿ ಎಂದ ಆಯೋಗ; ಶರದ್‌ ಪವಾರ್‌ಗೆ ಹಿನ್ನಡೆ

Sharad Pawar And Ajit Pawar

Ajit Pawar's Faction Named Real NCP In Setback For Sharad Pawar

ನವದೆಹಲಿ: ನಿಜವಾದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ (NCP) ಯಾವುದು ಎಂಬ ತಿಕ್ಕಾಟದ ಮಧ್ಯೆಯೇ, ಅಜಿತ್‌ ಪವಾರ್‌ (Ajit Pawar) ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ (Real NCP) ಎಂದು ಚುನಾವಣೆ ಆಯೋಗವು ಆದೇಶಿಸಿದೆ. ಇದರಿಂದಾಗಿ ಶರದ್‌ ಪವಾರ್‌ (Sharad Pawar) ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ. ಅಷ್ಟೇ ಅಲ್ಲ, ಎನ್‌ಸಿಪಿ ಚಿಹ್ನೆಯಾಗಿರುವ ಗೋಡೆ ಗಡಿಯಾರ ಕೂಡ ಸೋದರಳಿಯ ಅಜಿತ್‌ ಪವಾರ್‌ ಬಣಕ್ಕೆ ಸೇರಿದೆ. ಹೊಸ ಚಿಹ್ನೆ ಹಾಗೂ ಹೆಸರು ಸೂಚಿಸುವಂತೆ ಶರದ್‌ ಪವಾರ್‌ ಅವರಿಗೆ ಚುನಾವಣೆ ಆಯೋಗವು ಫೆಬ್ರವರಿ 7ರ ಗಡುವು ಕೂಡ ನೀಡಿದೆ ಎಂದು ತಿಳಿದುಬಂದಿದೆ.

ಕಳೆದ ಆರು ತಿಂಗಳಿಂದ ಎರಡೂ ಬಣಗಳ ಅರ್ಜಿಗಳ ವಿಚಾರಣೆ ನಡೆಸಿದ ಚುನಾವಣೆ ಆಯೋಗವು ಶಾಸಕರ ಬಲದಿಂದಾಗಿ ಅಜಿತ್‌ ಪವಾರ್‌ ಬಣವೇ ನಿಜವಾದ ಎನ್‌ಸಿಪಿ ಎಂಬುದಾಗಿ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೊಸ ಚಿಹ್ನೆ ಹಾಗೂ ಹೆಸರನ್ನು ಫೆಬ್ರವರಿ 7ರ ಮಧ್ಯಾಹ್ನ 3 ಗಂಟೆಯೊಳಗೆ ಸೂಚಿಸಬೇಕು ಎಂದು ಚುನಾವಣೆ ಆಯೋಗವು ಶರದ್‌ ಪವಾರ್‌ ಅವರಿಗೆ ಸೂಚಿಸಿದೆ. ಶರದ್‌ ಪವಾರ್‌ ಅವರು 1999ರಲ್ಲಿ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷವನ್ನು ಸ್ಥಾಪಿಸಿದ್ದರು. ಈಗ ಅವರು ಸ್ಥಾಪಿಸಿದ ಪಕ್ಷದ ಚಿಹ್ನೆ ಹಾಗೂ ಹೆಸರು ಸೋರಳಿಯನ ಪಾಲಾಗಿದೆ.

ಮೂಲಗಳ ಪ್ರಕಾರ, ಚುನಾವಣೆ ಆಯೋಗದ ತೀರ್ಪು ಪ್ರಶ್ನಿಸಿ ಶರದ್‌ ಪವಾರ್‌ ಅವರು ಸುಪ್ರೀಂ ಕೋರ್ಟ್‌ ಮೊರೆಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಚುನಾವಣೆ ಆಯೋಗದ ತೀರ್ಪಿನ ಬಳಿಕ ಮಾತನಾಡಿದ ಅಜಿತ್‌ ಪವಾರ್‌, “ಚುನಾವಣೆ ಆಯೋಗ ನೀಡಿದ ತೀರ್ಪನ್ನು ನಾವು ವಿನಮ್ರವಾಗಿ ಸ್ವಾಗತಿಸುತ್ತೇವೆ. ನಾವು ನೀಡಿದ ಮಾಹಿತಿ, ದಾಖಲೆ ಪರಿಶೀಲಿಸಿದ ಬಳಿಕ ತೀರ್ಪು ನೀಡಿದೆ. ಚುನಾವಣೆ ಆಯೋಗಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಕಳೆದ ವರ್ಷದ ಜುಲೈನಲ್ಲಿ ಎನ್‌ಸಿಪಿ ಶಾಸಕರ ಬೆಂಬಲದೊಂದಿಗೆ ಅಜಿತ್‌ ಪವಾರ್‌ ಅವರು ಬಿಜೆಪಿ-ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ಹೆಚ್ಚಿನ ಶಾಸಕರನ್ನು ಸೆಳೆದುಕೊಂಡು, ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಅಜಿತ್‌ ಪವಾರ್‌, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಡಿಸಿಎಂ ಆಗಿ ಪದಗ್ರಹಣ ಮಾಡಿದ ಬಳಿಕ ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಶರದ್‌ ಪವಾರ್‌ ಅವರನ್ನು ವಜಾಗೊಳಿಸಿದ್ದರು. ಶರದ್‌ ಪವಾರ್‌ ಅವರನ್ನು ವಜಾಗೊಳಿಸಿದ ಅಜಿತ್‌ ಪವಾರ್‌, ತಮ್ಮ ಬಣವೇ ನಿಜವಾದ ಎನ್‌ಸಿಪಿ ಎಂಬುದಾಗಿ ಗುರುತಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Gautam Adani : ಅದಾನಿ ಭೇಟಿ ಮಾಡಿದ ಶರದ್​ ಪವಾರ್​; ರಾಹುಲ್​ ಮಾತಿಗೆ ಕಿಮ್ಮತ್ತಿಲ್ಲ ಎಂದ ಬಿಜೆಪಿ!

ಶರದ್‌ ಪವಾರ್‌ ಬಣದ ಎನ್‌ಸಿಪಿ ಹಾಗೂ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯ ಶಾಸಕರ ಸಂಖ್ಯಾಬಲ, ಸುಮಾರು 10 ಸಲ ವಿಚಾರಣೆ ನಡೆಸಿದ ಬಳಿಕ ಚುನಾವಣೆ ಆಯೋಗವು ಅಜಿತ್‌ ಪವಾರ್‌ ಅವರ ಬಣವೇ ನಿಜವಾದ ಎನ್‌ಸಿಪಿ ಎಂಬುದಾಗಿ ಘೋಷಿಸಿದೆ. ಮೂಲಗಳ ಪ್ರಕಾರ, ಅಜಿತ್‌ ಪವಾರ್‌ ಬಣದಲ್ಲಿ 41 ಶಾಸಕರಿದ್ದರೆ, ಶರದ್‌ ಪವಾರ್‌ ಅವರ ಬಣದಲ್ಲಿ ಕೇವಲ 11 ಶಾಸಕರಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕರ ಬೆಂಬಲದ ಲೆಕ್ಕಾಚಾರದಂತೆಯೇ ಚುನಾವಣೆ ಆಯೋಗವು ಅಜಿತ್‌ ಪವಾರ್‌ ಪರವಾಗಿ ತೀರ್ಪು ನೀಡಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ಅವರು ಶಿವಸೇನೆಯನ್ನು ಇಬ್ಭಾಗ ಮಾಡಿ, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದಾರೆ. ಆಗಲೂ ಚುನಾವಣೆ ಆಯೋಗವು ಏಕನಾಥ್‌ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿತ್ತು. ಸುಪ್ರೀಂ ಕೋರ್ಟ್‌ ಕೂಡ ಇದೇ ಘೋಷಣೆ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version