ಮುಂಬೈ: ಚಿಕ್ಕಪ್ಪ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಬಣ ತೊರೆದು, ಶಾಸಕರ ಬೆಂಬಲದೊಂದಿಗೆ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸುವ ಮೂಲಕ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೀಗ ಶರದ್ ಪವಾರ್ ವಿರುದ್ಧ ವಾಕ್ಸಮರ ಆರಂಭಿಸಿದ್ದಾರೆ. “ಶರದ್ ಪವಾರ್ ಅವರೇ, ನಿಮಗೆ 83 ವರ್ಷ ವಯಸ್ಸು. ಇನ್ನಾದರೂ ನಿವೃತ್ತಿ ಹೊಂದಿ” ಎಂದು ಅಜಿತ್ ಪವಾರ್ ಹೇಳಿಕೆಗೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಟಾಂಗ್ ನೀಡಿದ್ದಾರೆ.
ಅಜಿತ್ ಪವಾರ್ ಹೇಳಿದ್ದೇನು?
ಎನ್‌ಸಿಪಿ ಸಭೆಯಲ್ಲಿ ಮಾತನಾಡಿದ ಅಜಿತ್ ಪವಾರ್, ಶರದ್ ಪವಾರ್ ನಿವೃತ್ತಿ ಬಗ್ಗೆ ಮಾತನಾಡಿದರು. “ಬಿಜೆಪಿ ನಾಯಕರು 75 ವರ್ಷ ವಯಸ್ಸಾಗುತ್ತಲೇ ನಿವೃತ್ತಿ ಹೊಂದುತ್ತಾರೆ. ಎಲ್.ಕೆ.ಆಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರೇ ಇದಕ್ಕೆ ನಿದರ್ಶನ. ಇದರಿಂದ ಹೊಸ ಪೀಳಿಗೆಯ ಜನ ರಾಜಕೀಯಕ್ಕೆ ಬರಲು, ಏಳಿಗೆ ಹೊಂದಲು ಕಾರಣವಾಗುತ್ತದೆ. ನಿಮಗೆ ಈಗ 83 ವರ್ಷ ವಯಸ್ಸು. ಈಗಲಾದರೂ ನಿವೃತ್ತಿ ಹೊಂದಿ” ಎಂದು ಅಜಿತ್ ಪವಾರ್ ಹೇಳಿದ್ದರು.
“ನೀವು ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿ, ಮನೆಯಲ್ಲಿ ವಿಶ್ರಾಂತಿ ಪಡೆಯಿರಿ. ನಮಗೆ ನೀವು ಆಶೀರ್ವಾದ ಮಾಡಿ. ನೀವು ಇನ್ನಷ್ಟು ದಿನ ಆರೋಗ್ಯದಿಂದ ಇರಬೇಕು ಎಂಬುದಾಗಿ ಪ್ರಾರ್ಥಿಸುತ್ತೇನೆ. ನೀವು ಎಲ್ಲರ ಮುಂದೆ ನನ್ನನ್ನು ಖಳನಾಯಕನಂತೆ ಬಿಂಬಿಸಿದಿರಿ. ಆದರೂ ನಾನು ನಿಮ್ಮ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ” ಎಂದು ಪಕ್ಷದ ಸಭೆಯಲ್ಲಿ ಅಜಿತ್ ಪವಾರ್ ತಿಳಿಸಿದ್ದರು.
ಇದನ್ನೂ ಓದಿ: NCP Crisis: ಎನ್‌ಸಿಪಿ ಮುಖ್ಯಸ್ಥ ಹುದ್ದೆಯಿಂದ ಶರದ್ ಪವಾರ್‌ರನ್ನೇ ಕಿತ್ತು ಹಾಕಿದ ಬಂಡಾಯ ನಾಯಕ ಅಜಿತ್!
ಸುಪ್ರಿಯಾ ಸುಳೆ ಟಾಂಗ್
ಶರದ್ ಪವಾರ್ ಅವರಿಗೆ ವಯಸ್ಸಾಯ್ತು, ಅವರು ನಿವೃತ್ತರಾಗಲಿ ಎಂಬ ಅಜಿತ್ ಪವಾರ್ ಹೇಳಿಕೆಗೆ ಎನ್‌ಸಿಪಿ ಕಾರ್ಯಾಧ್ಯಕ್ಷೆಯೂ ಆದ ಸುಪ್ರಿಯಾ ಸುಳೆ ತಿರುಗೇಟು ನೀಡಿದ್ದಾರೆ. “ಅಜಿತ್ ಪವಾರ್ ಅವರು ನಮ್ಮ ಬಗ್ಗೆ ಏನಾದರೂ ಮಾತನಾಡಲಿ. ಆದರೆ, ನಮ್ಮ ತಂದೆಯವರ ಬಗ್ಗೆ ಮಾತನಾಡಬಾರದು. ಅಮಿತಾಭ್ ಬಚ್ಚನ್ ಅವರಿಗೆ 82 ವರ್ಷ ವಯಸ್ಸು, ರತನ್ ಟಾಟಾ ಅವರು ಶರದ್ ಪವಾರ್ ಅವರಿಗಿಂತ ಮೂರು ವರ್ಷ ದೊಡ್ಡವರು. ಇವರು ಸಕ್ರಿಯವಾಗಿದ್ದಾರೆ, ಅವರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಟಾಂಗ್ ಕೊಟ್ಟಿದ್ದಾರೆ.