ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ (Anil Antony:) ಅವರು ಬಿಜೆಪಿ ಸೇರ್ಪಡೆಯಾಗಿದ್ದು, ಇದರಿಂದ ಕೇರಳದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ, ಬಿಜೆಪಿಗೆ ಬಲ ಬಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿ ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಮಾಡಿದ ಟ್ವೀಟ್ ಬಳಿಕ ಉಂಟಾದ ಭಿನ್ನಾಭಿಪ್ರಾಯಕ್ಕೆ ಬೇಸತ್ತು ಅನಿಲ್ ಆ್ಯಂಟನಿ ಅವರು ಕಳೆದ ಜನವರಿಯಲ್ಲಿ ಕಾಂಗ್ರೆಸ್ ತೊರೆದಿದ್ದರು. ಈಗ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಅನಿಲ್ ಆ್ಯಂಟನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅನಿಲ್ ಆ್ಯಂಟನಿ ಅವರು ಬಿಜೆಪಿ ಸೇರ್ಪಡೆಯಾದ ಕಾರಣ, ಅದರಲ್ಲೂ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರಾದ ಕಾರಣ ಕೇರಳದಲ್ಲಿ ಬಿಜೆಪಿಯು ತನ್ನ ಬಲ ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.
ಅನಿಲ್ ಆ್ಯಂಟನಿ ಅವರು ಯುವ ನಾಯಕರಾದ ಕಾರಣ ಕೇರಳದಲ್ಲಿ ಪ್ರಾಬಲ್ಯವಿಲ್ಲದ ಬಿಜೆಪಿಗೆ ಹೊಸ ನಾಯಕ ಸಿಕ್ಕಂತಾಗಿದೆ. ಅತ್ತ, ಕೇರಳದಲ್ಲಿಯೂ ಕಾಂಗ್ರೆಸ್ ಬಲ ಅಷ್ಟಕ್ಕಷ್ಟೇ ಇದೆ. ಹೀಗಿರುವ ಬೆನ್ನಲ್ಲೇ ಯುವ ನಾಯಕ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಹಿನ್ನಡೆಯುಂಟಾದಂತೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಗ್ಯೂ, ಸದ್ಯದ ಮಟ್ಟಿಗೆ ಅನಿಲ್ ಆ್ಯಂಟನಿ ಅವರಿಗೆ ಯಾವುದೇ ಜವಾಬ್ದಾರಿ ನೀಡಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪಿಯೂಷ್ ಗೋಯಲ್ ಜತೆ ಅನಿಲ್ ಆ್ಯಂಟನಿ
ಬಿಬಿಸಿಯು ಮೊದಲಿನಿಂದಲೂ ಭಾರತದ ವಿರುದ್ಧ ಪೂರ್ವಗ್ರಹದ ಇತಿಹಾಸವನ್ನು ಹೊಂದಿದೆ. ಪ್ರಧಾನಿ ಮೋದಿ ಮತ್ತು ಗುಜರಾತ್ ದಂಗೆ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವುದನ್ನು ಪ್ರಶ್ನಿಸಿ ಅನಿಲ್ ಆ್ಯಂಟನಿ ಟ್ವೀಟ್ ಮಾಡಿದ್ದರು. ಆದರೆ, ಆ್ಯಂಟನಿ ಪುತ್ರ ಮಾಡಿರುವ ಟ್ವೀಟ್ ಕಾಂಗ್ರೆಸ್ ಪಕ್ಷದೊಳಗೆ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಅಲ್ಲದೇ, ಹಲವರು ಅನಿಲ್‌ಗೆ ಕರೆ ಮಾಡಿ, ಟ್ವೀಟ್ ಹಿಂಪಡೆಯುವಂತೆ ಸಾಕಷ್ಟು ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆಯ ದೀರ್ಘ ಪತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.
ನನಗೆ ರಾತ್ರಿಯಿಡೀ ಬೆದರಿಕೆ ಕರೆಗಳು ಮತ್ತು ದ್ವೇಷದ ಸಂದೇಶಗಳು ಬಂದಿವೆ. ಕಳೆದ 24 ಗಂಟೆಗಳಲ್ಲಿ ಬಹಳಷ್ಟು ಸಂಗತಿಗಳು ಸಂಭವಿಸಿವೆ. ವಿಶೇಷವಾಗಿ ಕಾಂಗ್ರೆಸ್‌ನಿಂದಲೇ ನನಗೆ ಸಾಕಷ್ಟು ನೋವುಂಟಾಗಿದೆ ಎಂದು ಅವರು ಹೇಳಿದ್ದರು. ಅಲ್ಲದೇ, ಭಾರತ್ ಜೋಡೋ ಯಾತ್ರೆ ಮೂಲಕ ಪ್ರೀತಿಯ ಸಂದೇಶವನ್ನು ಬೆಂಬಲಿಸುವವರಿಂದಲೇ ನನಗೆ ದ್ವೇಷದ ಸಂದೇಶಗಳು ಬಂದಿವೆ ಎಂದು ಹೇಳಿಕೊಂಡಿದ್ದರು. ಈ ಘಟನೆಯಿಂದ ಬೇಸತ್ತು ಅನಿಲ್ ಆ್ಯಂಟನಿ ಅವರು ಕಾಂಗ್ರೆಸ್ ತೊರೆದಿದ್ದರು.
ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯಿಂದ ಲಾಭವೇನು?