ನವದೆಹಲಿ: ಆಕಾಸ ವಿಮಾನಯಾನ ಸಂಸ್ಥೆ (Akasa Air) ಸ್ಥಾಪನೆಯಾಗಿ ಒಂದು ವರ್ಷವಾಗಿದೆ. ವಿಮಾನ ಹಾರಾಟ ಆರಂಭಿಸಿ ಕೇವಲ ಏಳು (2022ರ ಆಗಸ್ಟ್) ತಿಂಗಳಾಗಿದೆ. ಇದರ ಬೆನ್ನಲ್ಲೇ ವಿಮಾನಯಾನ ಸಂಸ್ಥೆಯು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು-ಪುಣೆ ಮಧ್ಯೆ ವಿಮಾನ ಸಂಚಾರ ಆರಂಭಿಸಿದ್ದ ಆಕಾಸ ಈಗ ವಿದೇಶಕ್ಕೂ ತನ್ನ ರೆಕ್ಕೆಗಳನ್ನು ಚಾಚುತ್ತಿದೆ. ಅಲ್ಲದೆ, 2024ರ ಮಾರ್ಚ್ ವೇಳೆಗೆ ಒಂದು ಸಾವಿರ ಉದ್ಯೋಗಿಗಳನ್ನೂ ನೇಮಿಸಿಕೊಳ್ಳಲು ಮುಂದಾಗಿದೆ.
“ವಿಮಾನಯಾನ ಸಂಸ್ಥೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. 2024ರ ಮಾರ್ಚ್ ವೇಳೆಗೆ ಇನ್ನೂ ಒಂದು ಸಾವಿರ ಉದ್ಯೋಗಿಗಳನ್ನು ನೇಮಿಸಲಾಗುತ್ತದೆ. ಆ ಮೂಲಕ ಒಟ್ಟು ಸಿಬ್ಬಂದಿಯ ಸಂಖ್ಯೆ ಮೂರು ಸಾವಿರ ಆಗಲಿದೆ. ಸದ್ಯ, ವಿಮಾನಯಾನ ಸಂಸ್ಥೆಯ 19 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳು ದೇಶದಲ್ಲಿ ಹಾರಾಟ ನಡೆಸುತ್ತಿವೆ. ಇನ್ನೂ 72 ಹೊಸ ವಿಮಾನಗಳು ಸೇರ್ಪಡೆಯಾಗಲಿವೆ. ಹಾಗೆಯೇ, ಮಾರ್ಚ್ ಅಂತ್ಯದ ವೇಳೆಗೆ ವಿದೇಶಗಳಿಗೂ ವಿಮಾನಗಳು ಹಾರಲಿವೆ” ಎಂದು ಆಕಾಸ ಏರ್‌ಲೈನ್ ಸಂಸ್ಥೆ ಸಿಇಒ ವಿನಯ್ ದುಬೆ ಮಾಹಿತಿ ನೀಡಿದರು.
“ಈಗ ದೇಶಾದ್ಯಂತ 11೦ ಫ್ಲೈಟ್ ಆಪರೇಷನ್‌ಗಳು ನಡೆಯುತ್ತಿವೆ. ಬೇಸಿಗೆ ಅಂತ್ಯದ ವೇಳೆಗೆ ಇದನ್ನು 150ಕ್ಕೆ ಏರಿಕೆ ಮಾಡಲಾಗುತ್ತದೆ. ಆದಾಗ್ಯೂ, ಸದ್ಯ 2,000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 1,100 ಪೈಲಟ್‌ಗಳು ಹಾಗೂ ಫ್ಲೈಟ್ ಅಟೆಂಡಂಟ್‌ಗಳು ಇದ್ದಾರೆ. ಇವರ ತಂಡಕ್ಕೆ ಇನ್ನೂ ಒಂದು ಸಾವಿರ ಉದ್ಯೋಗಿಗಳು ಸೇರ್ಪಡೆಯಾಗಲಿದ್ದಾರೆ. ಯಾವ ದೇಶಗಳಿಗೆ ವಿಮಾನ ಸಂಚಾರ ಆರಂಭಿಸಬೇಕು ಎಂಬ ಕುರಿತು ಇದುವರೆಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಎಷ್ಟು ಸಾಧ್ಯವೋ, ಅಷ್ಟು ದೇಶಗಳಿಗೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ” ಎಂದು ತಿಳಿಸಿದರು.
“ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಹಾರಾಟಕ್ಕೂ ಮೊದಲೇ ಹೊಸ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ. ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ 9 ವಿಮಾನಗಳನ್ನು ಖರೀದಿಸಲಾಗುತ್ತದೆ. ಭಾರತವು ವಿಮಾನಯಾನ ಸಂಸ್ಥೆಗೆ ಪ್ರಾಶಸ್ತ ಸ್ಥಳವಾದ ಕಾರಣ ಎಷ್ಟು ವಿಮಾನಗಳನ್ನು ಖರೀದಿಸಿದರೂ ಉದ್ಯಮ ನಡೆಯುತ್ತದೆ. ವಿದೇಶಗಳಿಗೆ ವಿಮಾನ ಸಂಚಾರ ಆರಂಭಿಸಲು ಕೂಡ ಉತ್ತಮ ಬೇಡಿಕೆ ಇದೆ. ಹಾಗಾಗಿ ವಿಮಾನಯಾನ ಸಂಸ್ಥೆಯು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ” ಎಂದರು.
ಆಕಾಸ ಏರ್ ವಿಮಾನಯಾನ ಸಂಸ್ಥೆಯನ್ನು ಕಳೆದ ವರ್ಷ ನಿಧನರಾದ ಹೂಡಿಕೆ ತಜ್ಞ, ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಅವರು ಸ್ಥಾಪಿಸಿದ್ದಾರೆ. ವಿನಯ್ ದುಬೆ ಕೂಡ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಒಟ್ಟಿನಲ್ಲಿ ಭಾರತ ಸೇರಿ ಜಾಗತಿಕವಾಗಿ ಹಲವು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬೆನ್ನಲ್ಲೇ, ಆಕಾಸ ಏರ್ ಸಂಸ್ಥೆಯು ಒಂದು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದನ್ನೂ ಓದಿ: Akasa Air | ಪುಣೆ-ಬೆಂಗಳೂರು ಮಧ್ಯೆ ವಿಮಾನ ಸಂಚಾರ ಪ್ರಾರಂಭಿಸಿದ ಆಕಾಸ ಏರ್; ದಿನಕ್ಕೆ 3 ಫ್ಲೈಟ್ಗಳ ಹಾರಾಟ